ಮಹಿಳೆಯರ ನೇಮಕಾತಿ ವೇಳೆ ಎದೆಯಳತೆ ಮಾನದಂಡ ಅತಿರೇಕದ ಕ್ರಮ: ರಾಜಸ್ಥಾನ ಹೈಕೋರ್ಟ್

Update: 2023-08-17 03:07 GMT

ಜೋಧಪುರ: ಅರಣ್ಯ ಅಧಿಕಾರಿಗಳ ಹುದ್ದೆಗೆ ಅಥವಾ ಯಾವುದೇ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ದೈಹಿಕ ಪರೀಕ್ಷೆಯ ವೇಳೆ ಮಹಿಳಾ ಅಭ್ಯರ್ಥಿಗಳ ಶ್ವಾಸಕೋಶ ಸಾಮರ್ಥ್ಯವನ್ನು ಮಾಪನ ಮಾಡಲು ಎದೆಯಳತೆಯ ಮಾನದಂಡ ಇಟ್ಟಿರುವ ಕ್ರಮವನ್ನು ರಾಜಸ್ಥಾನ ಹೈಕೋರ್ಟ್ ತಳ್ಳಿಹಾಕಿದೆ. ಇದು ನಿರಂಕುಶ ಮತ್ತು ಅತಿರೇಕದ ಕ್ರಮವಾಗಿದ್ದು, ಮಹಿಳೆಯರ ಘನತೆಗೆ ಕುಂದು ತರುವಂತಹದ್ದು ಎಂದು ಸ್ಪಷ್ಟಪಡಿಸಿದೆ.

ಮಹಿಳಾ ಅಭ್ಯರ್ಥಿಗಳಿಗೆ ಈ ಅನಪೇಕ್ಷಿತ ಅವಮಾನ ತಡೆಯುವ ನಿಟ್ಟಿನಲ್ಲಿ ಅಪೇಕ್ಷಿತ ಮಟ್ಟದ ಶ್ವಾಸಕೋಶ ಸಾಮರ್ಥ್ಯವನ್ನು ನಿರ್ಧರಿಸಲು ಪರ್ಯಾಯ ವಿಧಾನವನ್ನು ಅನುಸರಿಸುವ ಸಾಧ್ಯತೆಗಳ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುವಂತೆ ಕೋರ್ಟ್ ನಿರ್ದೇಶನ ನೀಡಿದೆ.

ಅರಣ್ಯ ರಕ್ಷಕರ ಹುದ್ದೆಗೆ ನಡೆಸಿದ ನೇಮಕಾತಿ ಪ್ರಕ್ರಿಯೆ ವೇಳೆ ಎಲ್ಲ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದರೂ, ಎದೆಯಳತೆ ಮಾನದಂಡದ ಆಧಾರದಲ್ಲಿ ಅನರ್ಹಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಮೂವರು ಮಹಿಳಾ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ದಿನೇಶ್ ಮೆಹ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಾಗಲೇ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕೋರ್ಟ್ ಬಯಸುತ್ತದೆ. ಅರಣ್ಯ ಇಲಾಖೆ ಹುದ್ದೆಯಾಗಿರಲಿ, ಯಾವುದೇ ಹುದ್ದೆಯಾಗಿರಲಿ ಮಹಿಳಾ ಅಭ್ಯರ್ಥಿಗಳ ಎದೆಯಳತೆ ಮಾನದಂಡದ ಬಗ್ಗೆ ಸಮಾಲೋಚನೆ ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಹಿಳೆಯರ ಎದೆಯಳತೆ ಮತ್ತು ಅದರ ವಿಸ್ತರಣೆ ಮಹಿಳಾ ಅಭ್ಯರ್ಥಿಗಳ ದೈಹಿಕ ಕ್ಷಮತೆಯ ಸೂಚಕವಲ್ಲ ಅಥವಾ ಶ್ವಾಸಕೋಶದ ಸಾಮಥ್ರ್ಯದ ಲಿಟ್ಮಸ್ ಟೆಸ್ಟ್ ಅಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News