ಪಶ್ಚಿಮ ಬಂಗಾಳ ಪ್ರವೇಶಿಸಲು ನುಸುಳುಕೋರರಿಗೆ ಬಿಎಸ್‌ಎಫ್ ಸಹಾಯ ಮಾಡುತ್ತಿದೆ: ಮಮತಾ

Update: 2025-01-02 16:27 GMT

ಮಮತಾ ಬ್ಯಾನರ್ಜಿ | PC : PTI 

ಕೋಲ್ಕತ : ಪಶ್ಚಿಮ ಬಂಗಾಳವನ್ನು ಅಸ್ಥಿರಗೊಳಿಸುವುದಕ್ಕಾಗಿ ಭಾರತ ಪ್ರವೇಶಿಸಲು ‘‘ನುಸುಳುಕೋರರಿಗೆ’’ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯು ಸಹಾಯ ಮಾಡುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.

ಅಕ್ರಮ ವಲಸಿಗರನ್ನು ರಾಜ್ಯದೊಳಕ್ಕೆ ತಳ್ಳಲಾಗುತ್ತಿದೆ ಮತ್ತು ಅದಕ್ಕಾಗಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹೊಣೆ ಮಾಡಲಾಗುತ್ತಿದೆ ಎಂದು ಮಮತಾ ಹೇಳಿದ್ದಾರೆ.

‘‘ಇಸ್ಲಾಮ್‌ಪುರ, ಸಿತಾಯಿ ಮತ್ತು ಚೋಪ್ರದಲ್ಲಿರುವ ಬಿಎಸ್‌ಎಫ್ ಗಡಿ ಠಾಣೆಗಳ ಮೂಲಕ ಜನರು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ ಎನ್ನುವ ಸುದ್ದಿ ನಮಗೆ ಬಂದಿದೆ. ನೀವು ಯಾಕೆ ಪ್ರತಿಭಟಿಸುತ್ತಿಲ್ಲ? ಗಡಿಯು ಬಿಎಸ್‌ಎಫ್ ನಿಯಂತ್ರಣದಲ್ಲಿದೆ. ಅಕ್ರಮ ವಲಸಿಗರು ಬಂಗಾಳವನ್ನು ಪ್ರವೇಶಿಸುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದರೆ ಮತ್ತು ಅದಕ್ಕಾಗಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹೊಣೆಯಾಗಿಸಿದರೆ, ತೃಣಮೂಲ ಕಾಂಗ್ರೆಸ್ ಇಂಥ ಕೆಲಸವನ್ನು ಮಾಡುವುದಿಲ್ಲ ಎನ್ನುವುದು ಅವರಿಗೆ ತಿಳಿದಿರಲಿ. ಬಿಎಸ್‌ಎಫ್‌ನ ಕುಕೃತ್ಯಗಳನ್ನು ಸಮರ್ಥಿಸುತ್ತಾ ತೃಣಮೂಲ ಪಕ್ಷವನ್ನು ನಿಂದಿಸಬೇಡಿ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೇಳಿದರು.

ನುಸುಳುಕೋರರಿಗೆ ಬಿಎಸ್‌ಎಫ್ ನೆರವು ನೀಡುತ್ತಿದೆ ಎನ್ನಲಾದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಅವರು ಬಿಎಸ್‌ಎಫ್ ಮಹಾನಿರ್ದೇಶಕ ರಾಜೀವ್ ಕುಮಾರ್‌ರಿಗೆ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಿದೆ.

‘‘ಗಡಿ ಭದ್ರತಾ ಪಡೆಯನ್ನು ಟೀಕಿಸಿದ ಮತ್ತು ನಿಂದಿಸಿದ ಎಕೈಕ ನಾಯಕಿ ಮಮತಾ ಬ್ಯಾನರ್ಜಿ. ಮಾದಕ ದ್ರವ್ಯ ಹಾಗೂ ಮಾನವ ಮತ್ತು ಜಾನುವಾರು ಕಳ್ಳಸಾಗಣೆದಾರರನ್ನು ಒಳಗೊಂಡ ಜಾಲವನ್ನು ಮತ್ತು ಜಾಲದ ರೂವಾರಿಗಳನ್ನು ಬಿಎಸ್‌ಎಫ್ ಸದೆ ಬಡಿದಿದೆ. ಇದು ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಯವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬಾಂಗ್ಲಾದೇಶದ ಪ್ರಸಕ್ತ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರುವ ಬಿಎಸ್‌ಎಫ್ ಜೊತೆ ಸಹಕರಿಸುವಂತೆ ನಾವು ಅವರಿಗೆ ಸಲಹೆ ನೀಡುತ್ತೇವೆ’’ ಎಂದು ಬಿಜೆಪಿ ನಾಯಕ ಅನಿರ್ಬನ್ ಗಂಗುಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News