ಶಾಸಕರ ಖರೀದಿ ಪ್ರಜಾಪ್ರಭುತ್ವಕ್ಕೆ ಅಪಾಯ: ರಾಘವ ಚಡ್ಡಾ
Update: 2024-01-28 16:32 GMT
ಹೊಸದಿಲ್ಲಿ: ಶಾಸಕರ ಖರೀದಿ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಆಪ್ನ ರಾಜ್ಯ ಸಭಾ ಸದಸ್ಯ ರಾಘವ್ ಚಡ್ಡಾ ರವಿವಾರ ಹೇಳಿದ್ದಾರೆ.
ಪಕ್ಷ ತ್ಯಜಿಸಲು ತನ್ನ 7 ಮಂದಿ ಶಾಸಕರಿಗೆ ಬಿಜೆಪಿ ತಲಾ 25 ಕೋ.ರೂ. ಆಮಿಷ ಒಡ್ಡಿತ್ತು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆರೋಪಿಸಿದ ದಿನದ ಬಳಿಕ ರಾಘವ ಜಡ್ಡಾ ಅವರು ಈ ಹೇಳಿಕೆ ನೀಡಿದ್ದಾರೆ.
ದೇಶಾದ್ಯಂತ ಶಾಸಕರನ್ನು ಖರೀದಿಸಲಾಗುತ್ತಿದೆ. ಹಣ ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿ ಸರಕಾರವನ್ನು ಉರುಳಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ತಾನು ಪಕ್ಷಾಂತರ ಕಾಯ್ದೆಯನ್ನು ಸಶಕ್ತಗೊಳಿಸಲು ಸಂಸತ್ತಿನಲ್ಲಿ ಖಾಸಗಿ ಸದಸ್ಯರ ಮಸೂದೆ ಮಂಡಿಸಿದ್ದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಈ ಮಸೂದೆ ತುಂಬಾ ಮುಖ್ಯವಾದುದು ಎಂದು ಚಡ್ಡಾ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.