ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ: ರಾಜಭವನ ಸಿಬ್ಬಂದಿ ವಿರುದ್ಧ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ತಡೆ
ಕೋಲ್ಕತಾ: ಮಹಿಳೆಯೋರ್ವರು ಪಶ್ಚಿಮ ಬಂಗಾಳ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸುವುದನ್ನು ತಡೆದ ಆರೋಪದಲ್ಲಿ ಬೋಸ್ ಅವರ ವಿಶೇಷ ಕರ್ತವ್ಯಾಧಿಕಾರಿ ಸಂದೀಪ ಸಿಂಗ್ ವಿರುದ್ಧ ದಾಖಲಾಗಿರುವ ಎಫ್ಐಆರ್ ನಲ್ಲಿ ಕಲಾಪಗಳಿಗೆ ಕಲ್ಕತ್ತಾ ಉಚ್ಚ ನ್ಯಾಯಾಲಯವು ಶುಕ್ರವಾರ ತಡೆ ನೀಡಿದೆ.
ರಾಜಭವನದಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗಿಯಾಗಿರುವ 29ರ ಹರೆಯದ ಮಹಿಳೆ ರಾಜ್ಯಪಾಲರು ಎ.24 ಮತ್ತು ಮೇ 2ರಂದು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಆರೋಪಿಸಿದ್ದರು. ಎರಡನೇ ಘಟನೆ ನಡೆದಿದ್ದ ದಿನ ಅವರು ರಾಜಭವನದ ಉಸ್ತುವಾರಿ ಅಧಿಕಾರಿಗೆ ದೂರು ಪತ್ರವನ್ನು ಬರೆದಿದ್ದರು.
ಸಿಂಗ್ ವಿರುದ್ಧ ಕೋಲ್ಕತಾ ಪೋಲಿಸರು ದಾಖಲಿಸಿರುವ ಪ್ರಕರಣದಲ್ಲಿ ಅವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಮತ್ತು ಅವರ ವಿರುದ್ಧ ತನಿಖೆಯು ಪ್ರಾಥಮಿಕ ಹಂತದಲ್ಲಿದೆ ಎನ್ನುವುದನ್ನು ನ್ಯಾ. ಅಮೃತಾ ಸಿನ್ಹಾ ಅವರ ಏಕ ನ್ಯಾಯಾಧೀಶ ಪೀಠವು ಗಣನೆಗೆ ತೆಗೆದುಕೊಂಡಿತು.
ಸಿಂಗ್ ಇತರ ಸಿಬ್ಬಂದಿಗಳೊಂದಿಗೆ ಸೇರಿಕೊಂಡು ತನ್ನನ್ನು ರಾಜಭವನದ ಆವರಣದಲ್ಲಿಯ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು. ಲೈಂಗಿಕ ಕಿರುಕುಳದ ವಿವರಗಳನ್ನು ಯಾವುದೇ ಅಧಿಕಾರಿಗಳೊಂದಿಗೆ ಹಂಚಿಕೊಳ್ಳದಂತೆ ಅಥವಾ ರಾಜ್ಯಪಾಲರ ವಿರುದ್ಧ ದೂರು ಸಲ್ಲಿಸದಂತೆ ಅವರು ತನಗೆ ಬೆದರಿಕೆಯೊಡ್ಡಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಬಹಿರಂಗಗೊಳಿಸಲಾಗಿರುವ ಅಂಶಗಳನ್ನು ಅಕ್ರಮ ಬಂಧನ ಎಂದು ಕರೆಯಬಹುದೇ ಎನ್ನುವುದನ್ನು ನಿರ್ಧರಿಸಬೇಕಿದೆ. ಈ ಹಂತದಲ್ಲಿ ಜೂ.17ರವರೆಗೆ ತಾತ್ಕಾಲಿಕ ತಡೆ ನೀಡಿದರೆ ತನಿಖೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುತ್ತದೆ ಎಂದು ಅನಿಸುವುದಿಲ್ಲ ಎಂದು ನ್ಯಾ.ಸಿನ್ಹಾ ಶುಕ್ರವಾರ ತನ್ನ ಆದೇಶದಲ್ಲಿ ತಿಳಿಸಿದರು.
ಮಹಿಳೆ ಮೇ 7ರಂದು ತನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ಮೇ 2ರಂದು ದಾಖಲಿಸಿದ್ದ ದೂರಿನಲ್ಲಿ ತನ್ನ ಹೆಸರಿರಲಿಲ್ಲ. ಹೀಗಾಗಿ ತನ್ನ ವಿರುದ್ಧದ ಆರೋಪ ನಂತರದ ಸೇರ್ಪಡೆಯಾಗಿದೆ ಎಂದು ಸಿಂಗ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.
ತನ್ನನ್ನು ದಿಗ್ಬಂಧನದಲ್ಲಿರಿಸಿದ್ದ ಕೊಠಡಿಯಿಂದ ಹೊರಬರಲು ತಾನು ಹೇಗೋ ಯಶಸ್ವಿಯಾಗಿದ್ದೆ ಎಂದು ಮಹಿಳೆ ದೂರಿನಲ್ಲಿ ಹೇಳಿಕೊಂಡಿರುವುದರಿಂದ ಅಕ್ರಮ ಬಂಧನದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವಾದಿಸಿರುವ ಸಿಂಗ್,ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.