ಕಾಂಗ್ರೆಸ್ ಗೆ ಕನಿಷ್ಠ 40 ಸ್ಥಾನ ಗೆಲ್ಲಲು ಸಾಧ್ಯವೇ?: ಮಮತಾ ಬ್ಯಾನರ್ಜಿ

Update: 2024-02-03 04:32 GMT

  Photo: fb.com/MamataBanerjeeOfficial

ಕೊಲ್ಕತ್ತಾ: ಇಂಡಿಯಾ ಮೈತ್ರಿಕೂಟ ಛಿದ್ರವಾಗುವ ವಿದ್ಯಮಾನಗಳ ನಡುವೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 40 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮೈತ್ರಿಕೂಟದ ಮುಖ್ಯ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ ಮುಸ್ಲಿಮರನ್ನು ಓಲೈಸುವ ಪ್ರಯತ್ನ ನಡೆಸಿದೆ ಎಂದು ಆಪಾದಿಸಿದ್ದಾರೆ.

ರಾಹುಲ್ಗಾಂಧಿಯವರ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಹೆಸರಿಸದೇ, ಈ ರಸ್ತೆ ಪಯಣ ಒಂದು ಫೋಟೋ ಶೂಟ್ ಹೊರತು ಜನರ ಬದುಕಿನ ಜತೆ ಯಾವುದೇ ನೇರ ಸಂಪರ್ಕ ಹೊಂದಿಲ್ಲ. ಚಹಾ ಅಂಗಡಿಗಳಲ್ಲಿ ಮತ್ತು ಇತರಡೆಗಳಲ್ಲಿ ಫೋಟೊಶೂಟ್ ಮಾಡುತ್ತಿರುವ ಅವರಿಗೆ ಮಕ್ಕಳ ಜತೆ ಹೇಗೆ ಆಡಬೇಕು, ಚಹಾ ಮಡುವುದು ಹೇಗೆ ಅಥವಾ ಬೀಡಿ ಸುತ್ತುವುದು ಹೇಗೆ ಎನ್ನುವುದು ಗೊತ್ತಿಲ್ಲ. ಅವರೊಬ್ಬ ವಲಸೆ ಹಕ್ಕಿ ಇದ್ದಂತೆ ಎಂದು ಅವರು ವ್ಯಂಗ್ಯವಾಡಿದರು.

"ಕಾಂಗ್ರೆಸ್ ಪಕ್ಷ 300 ಸ್ಥಾನಗಳಿಗೆ ಸ್ಪರ್ಧಿಸಿ ಉಳಿದ ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಡುವಂತೆ ನಾವು ಸಲಹೆ ಮಾಡಿದ್ದೆವು. ಆದರೆ ಅದು ಸಾಧ್ಯವಾಯಿತೆ? ಇಲ್ಲ. ಬದಲಾಗಿ ಅವರು ಮಾಡಿದ್ದೇನು? ಅವರು ಮೊದಲು ಮುಸ್ಲಿಮರನ್ನು ಓಲೈಸಲು ಬಂಗಾಳಕ್ಕೆ ಬಂದರು. ಬಿಜೆಪಿ ಹಿಂದೂಗಳ ಓಲೈಕೆಗೆ ಮುಂದಾದರೆ ಕಾಂಗ್ರೆಸ್ ಮುಸ್ಲಿಮರ ಓಲೈಕೆಯ ಪ್ರಯತ್ನ ನಡೆಸಿದೆ. ಬಿಜೆಪಿ ವಿರುದ್ಧ ಹೋರಾಡಬಲ್ಲ ಏಕೈಕ ರಾಜ್ಯ ಬಂಗಾಳ. ಕಾಂಗ್ರೆಸ್ ಗೆ ಇದನ್ನು ಮಾಡಲಾಗದು. ಅವರು ಕೇವಲ 40 ಸ್ಥಾನಗಳನ್ನು ಗೆಲ್ಲಲು ಕೂಡಾ ಸಾಧ್ಯವಾಗುತ್ತದೆಯೇ ಎಂಬ ಅನುಮಾನ ನನಗಿದೆ" ಎಂದು ಕೊಲ್ಕತ್ತಾದಲ್ಲಿ ಪಕ್ಷದ ಕಾರ್ಯಕರ್ತರ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಇಂಡಿಯಾ ಮೈತ್ರಿಕೂಟದ ಪಕ್ಷವಾಗಿದ್ದರೂ, ಬಂಗಾಳಕ್ಕೆ ಯಾತ್ರೆ ಪ್ರವೇಶಿಸುವ ಬಗ್ಗೆ ಕಾಂಗ್ರೆಸ್ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ಆಪಾದಿಸಿದರು. "ಆದರೆ ನೀವು ಬಂಗಾಳಕ್ಕೆ ಏಕೆ ಬಂದಿದ್ದೀರಿ? ಉತ್ತರ ಪ್ರದೇಶಕ್ಕೆ ಏಕೆ ಹೋಗಿಲ್ಲ? ನಿಮಗೆ ಧೈರ್ಯ ಇದ್ದರೆ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶಕ್ಕೆ ಹೋಗಿ ಅಲ್ಲಿ ಬಿಜೆಪಿಯನ್ನು ಸೋಲಿಸಿ" ಎಂದು ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News