ರಾಜತಾಂತ್ರಿಕ ಉದ್ವಿಗ್ನತೆ ನಡುವೆ ಭಾರತವನ್ನು ‘ಸೈಬರ್ ಬೆದರಿಕೆ’ ಪಟ್ಟಿಗೆ ಸೇರಿಸಿದ ಕೆನಡಾ

Update: 2024-11-03 16:31 GMT

PC : PTI

ಹೊಸದಿಲ್ಲಿ : ಉಭಯ ದೇಶಗಳ ನಡುವೆ ಹದಗೆಟ್ಟಿರುವ ರಾಜತಾಂತ್ರಿಕ ಸಂಬಂಧಗಳ ನಡುವೆ ಕೆನಡಾ ಸರಕಾರವು ಇದೇ ಮೊದಲ ಬಾರಿಗೆ ಭಾರತವನ್ನು ಸೈಬರ್ ಬೆದರಿಕೆಯೊಡ್ಡುವ ವಿರೋಧಿ ದೇಶಗಳ ಪಟ್ಟಿಗೆ ಸೇರಿಸಿದೆ. ಭಾರತ ಸರಕಾರವು ತನ್ನ ವಿರುದ್ಧ ಬೇಹುಗಾರಿಕೆಯಲ್ಲಿ ತೊಡಗಿರಬಹುದು ಎಂದು ಹೇಳಿದೆ.

ಭಾರತವು ಪಟ್ಟಿಯಲ್ಲಿ ಚೀನಾ, ರಶ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ನಂತರ ಐದನೇ ಸ್ಥಾನದಲ್ಲಿದೆ.

ಕೆನಡಾದ ಸೈಬರ್ ಸೆಕ್ಯೂರಿಟಿ ಕೇಂದ್ರವು ಅ.30ರಂದು ಬಿಡುಗಡೆಗೊಳಿಸಿದ ತನ್ನ ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ 2025-26 ವರದಿಯಲ್ಲಿ ‘ಭಾರತವು ಬೇಹುಗಾರಿಕೆ, ಭಯೋತ್ಪಾದನೆ ನಿಗ್ರಹ ಮತ್ತು ದೇಶದ ಜಾಗತಿಕ ಸ್ಥಾನಮಾನವನ್ನು ಉತ್ತೇಜಿಸುವ ಪ್ರಯತ್ನಗಳು ಸೇರಿದಂತೆ ತನ್ನ ರಾಷ್ಟ್ರೀಯ ಭದ್ರತಾ ಅಗತ್ಯಗಳನ್ನು ಹೆಚ್ಚಿಸಿಕೊಳ್ಳಲು ತನ್ನ ಸೈಬರ್ ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಿರುವ ಸಾಧ್ಯತೆಯಿದೆ’ ಎಂದು ಹೇಳಿದೆ.

ಬೇಹುಗಾರಿಕೆ ಉದ್ದೇಶದಿಂದ ಭಾರತ ಸರಕಾರದಿಂದ ಪ್ರಾಯೋಜಿತ ವ್ಯಕ್ತಿಗಳು ಕೆನಡಾ ಸರಕಾರದ ನೆಟ್‌ ವರ್ಕ್‌ ಗಳ ವಿರುದ್ಧ ಸೈಬರ್ ಬೆದರಿಕೆ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ ಎಂದೂ ವರದಿಯು ತಿಳಿಸಿದೆ.

ವರದಿಯ ಪ್ರಕಾರ, ಕೆನಡಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕೆನಡಾ ವಿರುದ್ಧ ಭಾರತ ಸರಕಾರದಿಂದ ಪ್ರಾಯೋಜಿತ ಸೈಬರ್ ಬೆದರಿಕೆ ಚಟುವಟಿಕೆಯನ್ನು ಪ್ರಚೋದಿಸುವ ಹೆಚ್ಚಿನ ಸಾಧ್ಯತೆಯಿದೆ.

ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಕೊಲ್ಲುವ ಅಥವಾ ಬೆದರಿಸುವ ಸರಣಿ ಸಂಚುಗಳ ಹಿಂದೆ ಕೇಂದ್ರ ಗೃಹಸಚಿವ ಅಮಿತ್ ಶಾ ಇದ್ದಾರೆ ಎಂದು ಕೆನಡಾದ ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಅವರು ಇತ್ತೀಚಿಗೆ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈ ವರದಿ ಬಿಡುಗಡೆಗೊಂಡಿದೆ.

ವಿದೇಶಗಳಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ ಎನ್ನಲಾದ ಅಭಿಯಾನದಲ್ಲಿ ಭಾರತದ ಗೃಹಸಚಿವರು ಭಾಗಿಯಾಗಿದ್ದಾರೆ ಎಂದು ಕೆನಡಾದ ಅಧಿಕಾರಿಯೋರ್ವರು ಅಧಿಕೃತವಾಗಿ ಆರೋಪಿಸಿರುವುದು ಇದೇ ಮೊದಲು.

ಶನಿವಾರ ವರದಿಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಇದು ಭಾರತದ ಮೇಲೆ ದಾಳಿ ನಡೆಸುವ ಕೆನಡಾದ ತಂತ್ರಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದು ಹೇಳಿದೆ.

ಜಾಗತಿಕ ಅಭಿಪ್ರಾಯಗಳನ್ನು ಭಾರತದ ವಿರುದ್ಧ ತಿರುಚಲು ಕೆನಡಾ ಪ್ರಯತ್ನಿಸುತ್ತಿದೆ ಎಂದು ಅದರ ಹಿರಿಯ ಅಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು, ಇತರ ಸಂದರ್ಭಗಳಲ್ಲಿಯಂತೆ ಯಾವುದೇ ಪುರಾವೆಯಿಲ್ಲದೆ ಪದೇ ಪದೇ ಆರೋಪಗಳನ್ನು ಮಾಡಲಾಗುತ್ತಿದೆ ಎಂದರು.

ಜೈಸ್ವಾಲ್ ವರದಿಯನ್ನು ‘ಅಸಂಬದ್ಧ ಮತ್ತು ಆಧಾರರಹಿತ ’ಎಂದು ತಳ್ಳಿ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News