ವೀಸಾ ಸೇವೆ ಪುನಾರಂಭ:ಭಾರತದ ನಿರ್ಧಾರ ಸ್ವಾಗತಿಸಿದ ಕೆನಡಾ
ಹೊಸದಿಲ್ಲಿ : ಕೆನಡದ ನಿವಾಸಿಗಳಿಗೆ ವೀಸಾ ಸಂಬಂಧಿತ ಸೇವೆಗಳನ್ನು ಪುನಾರಂಭಿಸುವ ಭಾರತ ಸರಕಾರದ ನಿರ್ಧಾರವನ್ನು ಕೆನಡಾ ಗುರುವಾರ ಸ್ವಾಗತಿಸಿದೆ. ಆತಂಕದ ಸಮಯದ ಆನಂತರ ಕೆನಡದ ಪ್ರಜೆಗಳಿಗೆ ಎದುರಾದ ‘ಶುಭಸಂಕೇತ’ ಇದಾಗಿದೆ ಎಂದು ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್ ತಿಳಿಸಿದ್ದಾರೆ. ಆದರೆ ವೀಸಾ ಸೇವೆಗಳ ಅಮಾನತಿನಂತಹ ವಿದ್ಯಮಾನಗಳು ಯಾವತ್ತೂ ನಡೆಯಕೂಡದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಖಾಲಿಸ್ತಾನಿ ಭಯೋತ್ಪಾದಕ ಹರದೀಪ್ ಸಿಂಗ್ ನಿಜ್ಜಾರ್ ಕೊಲೆಯ ಹಿಂದೆ ಭಾರತದ ಬೇಹುಗಾರಿಕಾ ಸಂಸ್ಥೆಗಳ ಕೈವಾಡವಿದೆಯೆಂದು ಕೆನಡಾ ಆರೋಪಿಸಿದ ಕೆಲವೇ ದಿನಗಳ ಬಳಿಕ ಭಾರತವು ಕೆನಡದಲ್ಲಿ ಕೆಲವು ನಿರ್ದಿಷ್ಟ ವಿಧದ ವೀಸಾ ಸೇವೆಗಳನ್ನು ಅಮಾನತಿನಲ್ಲಿರಿಸಿತ್ತು.
ವೀಸಾಸೇವೆಗಳ ಅಮಾನತು, ನಿಜಕ್ಕೂ ಕಳವಳಕಾರಿಯಾದ ರಾಜತಾಂತ್ರಿಕ ಸನ್ನಿವೇಶವಾಗಿದ್ದು, ಕೆನಡಿಯನ್ ಸಮುದಾಯಗಳಲ್ಲಿ ಬಹಳಷ್ಟು ಕಳವಳವನ್ನು ಸೃಷ್ಟಿಸಿತ್ತು ಎಂದು ಅವರು ತಿಳಿಸಿದರು.
ಕೆನಡದ ಪ್ರಜೆಗಳಿಗೆ ಭಾರತವು ವೀಸಾ ಸೇವೆಯ ಪುನಾರಂಭಿಸಿರುವುದನ್ನು ಕೆನಡದ ತುರ್ತುಸ್ಥಿತಿ ನಿರ್ವಹಣಾ ಸಚಿವ ಹರಜಿತ್ ಸಜ್ಜನ್ ಅವರು ಸ್ವಾಗತಿಸಿದ್ದಾರೆ. ಆದರೆ ಈ ಸೇವೆಗಳನ್ನು ಪುನಾರಂಭಿಸುವ ಮೂಲಕ ಭಾರತವು ಯಾವ ಸಂದೇಶವನ್ನು ನೀಡಹೊರಟಿದೆ ಎಂಬ ಬಗ್ಗೆ ಸಂದೇಹ ಪಡುವುದಿಲ್ಲ ಎಂದು ಅವರು ಹೇಳಿದರು.
ಕೆನಡದ ಪ್ರಜೆಗಳಿಗೆ ಕೆಲವು ವಿಧದ ವೀಸಾ ಸೇವೆಗಳನ್ನು ಪುನಾರಂಭಿಸುವುದಾಗಿ ಭಾರತ ಬುಧವಾರ ಪ್ರಕಟಿಸಿತ್ತು. ಕೆನಡದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗಳು ಹಾಗೂ ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಹೊಸದಿಲ್ಲಿಯು ವ್ಯಕ್ತಪಡಿಸಿದ ಆತಂಕಗಳಿಗೆ ಕೆನಡದ ಅಧಿಕಾರಿಗಳು ‘ಉತ್ತಮವಾಗಿ ಪ್ರತಿಸ್ಪಂದನೆ’ ತೋರಿದ್ದರಿಂದ ಭಾರತವು ವೀಸಾ ಸೇವೆಗಳನ್ನು ಪುನಾರಂಭಿಸಿದೆಯೆಂದು ಕೆನಡದಲ್ಲಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.