ರಾಜಸ್ಥಾನದಲ್ಲಿ ಜಾತಿ ಸಮೀಕ್ಷೆ : ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಣೆ

Update: 2023-10-07 16:17 GMT

ಅಶೋಕ್ ಗೆಹ್ಲೋಟ್ | Photo: PTI 

ಜೈಪುರ: ಬಿಹಾರದಲ್ಲಿ ನಡೆಸಲಾಗಿರುವ ಜಾತಿ ಸಮೀಕ್ಷೆಯ ಮಾದರಿಯಲ್ಲೇ, ರಾಜಸ್ಥಾನದಲ್ಲೂ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.

ಜೈಪುರದಲ್ಲಿ ಶುಕ್ರವಾರ ನಡೆದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಯಿತು. ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಅಶೋಕ್ ಗೆಹ್ಲೋಟ್ ಅಲ್ಲದೆ, ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಸುಖ್ಜಿಂದರ್ ರಾಂಧ್ವ, ಆರ್ಪಿಸಿಸಿ ಅಧ್ಯಕ್ಷ ಗೋವಿಂದ ಸಿಂಗ್ ಡೋಟಸ್ರ ಮತ್ತು ಇತರ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

‘‘ಬಿಹಾರದಲ್ಲಿ ನಡೆದಿರುವಂತೆ ರಾಜಸ್ಥಾನ ಸರಕಾರವೂ ಜಾತಿ ಸಮೀಕ್ಷೆಯನ್ನು ನಡೆಸುವುದು’’ ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್ ಹೇಳಿದರು.

ಜಾತಿ ಸಮೀಕ್ಷೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಆಡಳಿತದಲ್ಲಿ ಪ್ರಾತಿನಿಧ್ಯ ಎಂಬ ಪಕ್ಷದ ನಾಯಕ ರಾಹುಲ್ ಗಾಂಧಿಯ ಕಲ್ಪನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

‘‘ಹಾಗಾಗಿ, ಪಕ್ಷದ ಆಣತಿಯನ್ನು ಗಮನದಲ್ಲಿಟ್ಟುಕೊಂಡು, ಜಾತಿ ಸಮೀಕ್ಷೆ ನಡೆಸುವ ನಿರ್ಧಾರವನ್ನು ರಾಜಸ್ಥಾನ ಸರಕಾರವು ತೆಗೆದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ’’ ಎಂದರು.

‘‘ದೇಶದಲ್ಲಿ ಹಲವಾರು ಜಾತಿಗಳಿವೆ. ವಿವಿಧ ಧರ್ಮಗಳ ಜನರು ಇಲ್ಲಿ ಬದುಕುತ್ತಿದ್ದಾರೆ. ಬೇರೆ ಬೇರೆ ಜಾತಿಗಳ ಜನರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾವ ಜಾತಿಯ ಎಷ್ಟು ಜನರು ಇದ್ದಾರೆ ಎನ್ನುವುದು ನಮಗೆ ತಿಳಿದರೆ, ಅವರಿಗೆ ಯಾವ ಯೋಜನೆಗಳನ್ನು ರೂಪಿಸಬೇಕು ಎನ್ನುವುದು ನಮಗೆ ತಿಳಿಯುತ್ತದೆ. ಜಾತಿವಾರು ಯೋಜನೆಗಳನ್ನು ರೂಪಿಸಲು ಇದರಿಂದ ಸುಲಭವಾಗುತ್ತದೆ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News