ಅಸ್ಸಾಂ-ಮೇಘಾಲಯ ಗಡಿಯಲ್ಲಿ ಆರು ಜನರ ಹತ್ಯೆಯ ಎರಡು ವರ್ಷಗಳ ಬಳಿಕ ಎಫ್ಐಆರ್ ದಾಖಲಿಸಿದ ಸಿಬಿಐ!

Update: 2024-05-30 15:22 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ : ಮೇಘಾಲಯದ ಗಡಿಗ್ರಾಮವೊಂದರ ಬಳಿ ಮರ ಕಳ್ಳಸಾಗಾಣಿಕೆ ಯತ್ನದ ಆರೋಪದಲ್ಲಿ ಅಸ್ಸಾಂ ಪೋಲಿಸರು ಮತ್ತು ಗುಂಪಿನ ನಡುವೆ ಘರ್ಷಣೆಯಲ್ಲಿ ಅಸ್ಸಾಂ ಅರಣ್ಯ ರಕ್ಷಕ ಸೇರಿದಂತೆ ಆರು ಜನರು ಕೊಲ್ಲಲ್ಪಟ್ಟು ಇತರ ಹಲವರು ಗಾಯಗೊಂಡಿದ್ದ ಎರಡು ವರ್ಷಗಳ ಬಳಿಕ ಸಿಬಿಐ ಕೊಲೆ ಮತ್ತು ಕ್ರಿಮಿನಲ್ ಒಳಸಂಚಿನ ಎಫ್ಐಆರ್ ದಾಖಲಿಸಿದೆ.

ಅಸ್ಸಾಂ ಪೋಲಿಸರ ದೂರಿನ ಮೇರೆಗೆ ಪೋಲಿಸ್ ತಂಡದ ಮೇಲೆ ದಾಳಿ, ದಂಗೆ, ಸುಲಿಗೆ,ಕೊಲೆಗೆ ಸಂಬಂಧಿಸಿದಂತೆ ಇನ್ನೊಂದು ಪ್ರಕರಣವನ್ನೂ ಸಿಬಿಐ ದಾಖಲಿಸಿಕೊಂಡಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಸೂಕ್ತ ನಿಷ್ಪಕ್ಷ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಅಸ್ಸಾಂ ಮತ್ತು ಮೇಘಾಲಯ ಸರಕಾರಗಳು ನಿರ್ಧರಿಸಿದ ಬಳಿಕ ಮೇಘಾಲಯದ ಪಶ್ಚಿಮ ಜೈಂತಿಯಾ ಹಿಲ್ಸ್ ಜಿಲ್ಲೆಯ ನಾರ್ತಿಯಾಂಗ್ ಪೋಲಿಸ್ ಠಾಣೆಯ ಸಬ್-ಇನ್ಸಪೆಕ್ಟರ್ ದೂರಿನ ಮೇರೆಗೆ ಮಂಗಳವಾರ ಮೊದಲ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

2022, ನ.22ರಂದು ನಸುಕಿನ ಮೂರು ಗಂಟೆಯ ಸುಮಾರಿಗೆ ಅಸ್ಸಾಮಿನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆ ಮತ್ತು ಮೇಘಾಲಯದ ಪಶ್ಚಿಮ ಜೈಂತಿಯಾ ಜಿಲ್ಲೆಯ ಮುಕ್ರೋಹ್ ಗ್ರಾಮದ ನಡುವಿನ ಗಡಿಪ್ರದೇಶದಲ್ಲಿ ಘಟನೆ ಸಂಭವಿಸಿತ್ತು. ಘಟನೆಯ ನಂತರ ಅಸ್ಸಾಂ ಪೋಲಿಸರು ಮರಗಳ ಕಳ್ಳ ಸಾಗಾಣಿಕೆ ಯತ್ನಕ್ಕೆ ಸಂಬಂಧಿಸಿದಂತೆ ಘರ್ಷಣೆ ವೇಳೆ ತಾವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ ಎಂದು ಹೇಳಿಕೊಂಡಿದ್ದರು. ಓರ್ವ ಅರಣ್ಯ ರಕ್ಷಕ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ನಾಲ್ವರು ಸ್ಥಳದಲ್ಲಿಯೇ ಸತ್ತಿದ್ದರೆ ಇಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಐವರು ತನ್ನ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದರು. ಅಸ್ಸಾಂ ಪೋಲಿಸರಿಂದ ಅಪ್ರಚೋದಿತ ಗುಂಡಿನ ದಾಳಿಯನ್ನು ‘ಅಮಾನವೀಯ’ಎಂದು ಬಣ್ಣಿಸಿದ್ದ ಅವರು,ರಾಜ್ಯವು ನ್ಯಾಯಾಂಗ ಆಯೋಗವನ್ನು ಮತ್ತು ವಿಶೇಷ ತನಿಖಾ ತಂಡವನ್ನು ರಚಿಸಲಿದೆ ಮತ್ತು ಅವು ಕೇಂದ್ರೀಯ ಸಂಸ್ಥೆಯು ಪ್ರಕರಣವನ್ನು ವಹಿಸಿಕೊಳ್ಳುವವರೆಗೆ ಘಟನೆಯ ತನಿಖೆಯನ್ನು ನಡೆಸಲಿವೆ ಎಂದು ತಿಳಿಸಿದ್ದರು.

ಅಸ್ಸಾಂ ಪೋಲಿಸರ ಮೇಲೆ ದಾಳಿಗೆ ಸಂಬಂಧಿಸಿದಂತೆ ಕಾಜಲ್ ನಾಥ್ ಎಂಬವರ ದೂರಿನ ಮೇರೆಗೆ ಸಿಬಿಐ ಎರಡನೇ ಎಫ್ ಐ ಆರ್ ದಾಖಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News