ಡಿಜಿಟಲ್ ಜಾಹೀರಾತು ನೀತಿಗೆ ಕೇಂದ್ರದ ಅನುಮೋದನೆ
ಹೊಸದಿಲ್ಲಿ: ತನ್ನ ಜಾಹೀರಾತು ವಿಭಾಗವನ್ನು ಸಬಲೀಕರಣಗೊಳಿಸಲು ಹಾಗೂ ಸಮರ್ಥವಾಗಿಸುವ ಉದ್ದೇಶದಿಂದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಡಿಜಿಟಲ್ ಜಾಹೀರಾತು ನೀತಿಗೆ ಶುಕ್ರವಾರ ಅನುಮೋದನೆ ನೀಡಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಪ್ರಚಾರ ಆಂದೋಲನಗಳನ್ನು ನಡೆಸಲು ಅದಕ್ಕೆ ಸಾಧ್ಯವಾಗಲಿದೆ.
ಮಾಧ್ಯಮಗಳ ಹೆಚ್ಚುತ್ತಿರುವ ಡಿಜಿಟಲೀಕರಣ ಹಾಗೂ ಮಾಧ್ಯಮಗಳ ಸ್ವರೂಪ ವಿಕಸನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿಗಳ ಕುರಿತು ಜನರಲ್ಲಿ ಮಾಹಿತಿಯನ್ನು ಹರಡಲು ಹಾಗೂ ಜಾಗೃತಿಯನ್ನು ಮೂಡಿಸಲು ಈ ನೀತಿಯು ಮಹತ್ವದ ಮೈಲುಗಲ್ಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ತಿಳಿಸಿದೆ.
ಡಿಜಿಟಲ್ ಜಗತ್ತಿನ ಚಂದಾದಾರರ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ, ಡಿಜಿಟಲ್ ಜಾಹೀರಾತುಗಳ ಮೂಲಕ ತಂತ್ರಜ್ಞಾನದಿಂದ ಕೂಡಿದ ಮಾಹಿತಿ ಆಯ್ಕೆಗಳು, ಪರಿಣಾಮಕಾರಿಯಾದ ರೀತಿಯಲ್ಲಿ ಸಂದೇಶಗಳನ್ನು ಹರಡಲು ಅನುಕೂಲ ಮಾಡಿಕೊಡಲಿದೆ. ಇದರಿಂದಾಗಿ ಜನಕೇಂದ್ರಿತ ಅಭಿಯಾನಗಳನ್ನು ಆಯೋಜಿಸಲು ತಗಲುವ ವೆಚ್ಚದಲ್ಲಿ ಮಿತವ್ಯಯವನ್ನು ಸಾಧಿಸಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಜನರು ಡಿಜಿಟಲ್ ಕ್ಷೇತ್ರದ ಮಾಧ್ಯಮಗಳತ್ತ ಗಣನೀಯ ಪ್ರಮಾಣದಲ್ಲಿ ಪಲ್ಲಟಗೊಂಡಿದ್ದಾರೆ. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ದೇಶದಲ್ಲಿ ಇಂಟರ್‌ನೆಟ್ ಹಾಗೂ ಸಾಮಾಜಿಕ ಹಾಗೂ ಡಿಜಿಟಲ್ ಮಾಧ್ಯಮಗಳ ಫ್ಲ್ಯಾಟ್‌ಫಾರಂಗಳ ಜೊತೆ ಸಂಪರ್ಕಿಸ್ಪಟ್ಟ ಜನರ ಸಂಖ್ಯೆಯಲ್ಲಿ ಭಾರೀ ಬೆಳವಣಿಗೆಯುಂಟಾಗಿದೆ ಎಂದು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯದ ಹೇಳಿಕೆ ತಿಳಿಸಿದೆ.
ನೂತನ ಡಿಜಿಟಲ್ ಜಾಹೀರಾತು ನೀತಿಯಿಂದಾಗಿ ಕೇಂದ್ರ ಪ್ರಸಾರ ಮಂಡಳಿಯು, ಓಟಿಟಿ ಹಾಗೂ ವಿಡಿಯೋ ಡಿಮಾಂಡ್‌ನಂತಹ ಕ್ಷೇತ್ರಗಳಿಗೂ ತನ್ನ ಏಜೆನ್ಸಿಗಳನ್ನು ಹಾಗೂ ಸಂಸ್ಥೆಗಳನ್ನು ನಿಯೋಜಿಸಲು ಸಾಧ್ಯವಾಗಲಿದೆ.
ಡಿಜಿಟಲ್ ಆಡಿಯೋ ಫ್ಲ್ಯಾಟ್‌ಫಾರಂಗಳಿಗೆ ಸಮಿತಿಯನ್ನು ನೇಮಿಸುವ ಮೂಲಕ ಪಾಡ್‌ಕಾಸ್ಟ್‌ಗಳು ಹಾಗೂ ಡಿಜಿಟಲ್ ಆಡಿಯೋ ಫ್ಲ್ಯಾಟ್‌ಫಾರಂಗಲ್ಲಿ ಹೆಚ್ಚುತ್ತಿರುವ ಶೋತೃಗಳ ಮೇಲೂ ತನ್ನ ಪ್ರಭಾವವನ್ನು ಬೀರಲು ಸಾಧ್ಯವಾಗಲಿದೆ.
ನೂತನ ಡಿಜಿಟಲ್ ಜಾಹೀರಾತು ನೀತಿಯಿಂದಾಗಿ ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್‌ಗಳ ಮೂಲಕವೂ ಸಾರ್ವಜನಿಕ ಸೇವೆಗಳ ಅಭಿಯಾನದ ಕುರಿತಾದ ಸಂದೇಶಗಳನ್ನು ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಲಿದೆ.