24 ರಾಜ್ಯಗಳು, ಕೇಂದ್ರಾಡಳಿತಕ್ಕೆ ಹಂಚಿಕೆಯಾಗಿದ್ದ 1 ಲಕ್ಷಕ್ಕೂ ಅಧಿಕ ಮನೆಗಳನ್ನು ವಾಪಸ್ ಪಡೆದು ಉತ್ತರಪ್ರದೇಶಕ್ಕೆ ನೀಡಿದ ಕೇಂದ್ರ
ಹೊಸದಿಲ್ಲಿ: ಮನೆ ಮಂಜೂರು ಮಾಡುವ ಗಡುವನ್ನು ತಪ್ಪಿಸಿಕೊಂಡ ಸುಮಾರು 24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 1.44 ಲಕ್ಷ ಮನೆಗಳ ಹಂಚಿಕೆಯನ್ನು ಕೇಂದ್ರ ಸರಕಾರ ಹಿಂತೆಗೆದುಕೊಂಡಿದೆ. ಈ ಮನೆಗಳನ್ನು ಹೆಚ್ಚುವರಿ ಸಂಪನ್ಮೂಲದ ನಿರೀಕ್ಷೆಯಲ್ಲಿದ್ದ ಉತ್ತರ ಪ್ರದೇಶಕ್ಕೆ ಹಂಚಿಕೆ ಮಾಡಿದೆ ಎಂದು Indian Express ವರದಿ ಮಾಡಿದೆ.
ವರದಿಯ ಪ್ರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಯೋಜನೆಯ ಉಸ್ತುವಾರಿ ಹೊಂದಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮನೆಗಳ ಹಂಚಿಕೆಯನ್ನು ವಾಪಸ್ ಪಡೆದಿರುವ ವಿಚಾರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.
ಮಾರ್ಚ್ 2024 ರೊಳಗೆ ಲೋಕಸಭೆ ಚುನಾವಣೆಗೆ ಮುನ್ನ ಪಿಎಂಎವೈ-ಜಿ ಯೋಜನೆಯಡಿ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.
ಒಟ್ಟು 2.04 ಕೋಟಿ ಮನೆಗಳನ್ನು ಸಾಮಾಜಿಕ-ಆರ್ಥಿಕ ಜಾತಿ ಗಣತಿ (SECC) ದತ್ತಾಂಶದ ಆಧಾರದ ಮೇಲೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ 91 ಲಕ್ಷ ಮನೆಗಳನ್ನು 2011 ರ ಎಸ್ ಇಸಿಸಿ ಅಡಿಯಲ್ಲಿ ಕೈಬಿಡಲಾಗಿದೆ ಎಂದು ಹೇಳಲಾದ ಫಲಾನುಭವಿಗಳನ್ನು ಗುರುತಿಸಲು ಸರಕಾರವು ಜನವರಿ, 2018 ರಿಂದ ಮಾರ್ಚ್, 2019 ರಲ್ಲಿ ನಡೆಸಿದ ಆವಾಸ್ + ಎಂಬ ಸಮೀಕ್ಷೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ.
ಆದಾಗ್ಯೂ, ಎರಡು ಡಝನ್ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು - SECC ಡೇಟಾದಿಂದ 7,496 ಮತ್ತು ಆವಾಸ್ + ಪಟ್ಟಿಯಿಂದ 1,36,724 ಸೇರಿದಂತೆ ಒಟ್ಟು 1,44,220 ಮನೆಗಳನ್ನು ಜೂನ್ 30ರ ಗಡುವಿನ ಮೊದಲು ಮಂಜೂರು ಮಾಡಲು ವಿಫಲವಾಗಿವೆ ಎಂದು Indian Express ವರದಿ ಹೇಳಿದೆ.
ಮನೆ ಮಂಜೂರು ಗಡು ತಪ್ಪಿಸಿಕೊಂಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು::ಗುಜರಾತ್, ತ್ರಿಪುರ, ಒಡಿಶಾ, ಸಿಕ್ಕಿಂ, ಮೇಘಾಲಯ, ಮಹಾರಾಷ್ಟ್ರ, ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಲಡಾಖ್, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಜಾರ್ಖಂಡ್ , ಪಂಜಾಬ್, ಹರ್ಯಾಣ, ಉತ್ತರಾಖಂಡ ಮತ್ತು ಆಂಧ್ರಪ್ರದೇಶ.