ಸುಕ್ಮಾ ಗುಂಡಿನ ಕಾಳಗದಲ್ಲಿ 10 ಮಾವೋವಾದಿಗಳ ಹತ್ಯೆ; ಈ ವಾರದಲ್ಲೇ ಸಾವಿನ ಸಂಖ್ಯೆ 15ಕ್ಕೆ ಏರಿಕೆ
ರಾಯಪುರ: ಬಸ್ತರ್ ನ ಸುಕ್ಮಾದಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡಸಿದ ಗುಂಡಿನ ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ 10 ಮಂದಿ ಮಾವೋವಾದಿಗಳು ಹತರಾಗಿದ್ದಾರೆ. ಅಕ್ಟೋಬರ್ 3ರಂದು ನಡೆದ ಗುಂಡಿನ ಕಾಳಗದಲ್ಲಿ 38 ಮಂದಿ ನಕ್ಸಲೀಯರನ್ನು ಹತ್ಯೆ ಮಾಡಿದ ಬಳಿಕ ಇದು ಅತಿದೊಡ್ಡ ದಾಳಿಯಾಗಿದೆ. ಇದರೊಂದಿಗೆ ಈ ವರ್ಷ 207 ನಕ್ಸಲೀಯರನ್ನು ಭದ್ರತಾ ಪಡೆ ಹತ್ಯೆ ಮಾಡಿದಂತಾಗಿದ್ದು, ಈ ವಾರದಲ್ಲೇ ಸಾವಿನ ಸಂಖ್ಯೆ 15ಕ್ಕೇರಿದೆ.
ಎಕೆ-47, ಇನ್ಸಾಸ್ ರೈಫಲ್ ಮತ್ತು ಎಸ್ಎಲ್ಆರ್ ಸೇರಿದಂತೆ 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲೀಯರ ಬಸ್ತರ್ ವಿಭಾಗದ ಮಿಲಿಟರಿ ಮುಖ್ಯಸ್ಥ ಮಕ್ದಮ್ ಮಾಸಾ ಹತ್ಯೆಗೀಡಾಗಿದ್ದಾನೆ. ಆತನ ಸುಳಿವು ನೀಡಿದವರಿಗೆ 8 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮೃತಪಟ್ಟ ಇತರ ಐದು ಮಂದಿ ಸ್ಮಾಲ್ ಆ್ಯಕ್ಷನ್ ಗ್ರೂಪ್ ನ ಕಮಾಂಡರ್ ಲಖ್ಮಾ ಮಾದ್ವಿ, ಪ್ಲಟೂನ್ 4 ಸದಸ್ಯ ದೂಧಿ ಹುಂಗಿ, ಮಕ್ದಮ್ ಜೀತು, ಮಕ್ದಮ್ ಕೋಸಿ ಮತ್ತು ಕೋವಸಿ ಕೇಸಾ ಎಂದು ಗುರುತಿಸಲಾಗಿದೆ. ಇವರ ಸುಳಿವು ನೀಡಿದವರಿಗೆ 5 ಲಕ್ಷ, ಹಾಗೂ ತಲಾ 2 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಇತರ ನಾಲ್ಕು ಮಂದಿಯ ಗುರುತು ಪತ್ತೆಯಾಗಿಲ್ಲ. ನಕ್ಸಲೀಯರು ಬಂದರ್ಪಾದರ್ ಪ್ರದೇಶಕ್ಕೆ ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಬಸ್ತರ್ ಐಜಿಪಿ ಸುಂದರರಾಜ್ ಹೇಳಿದ್ದಾರೆ.
ಮೂರು ಹಂತದ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ಹಾಗೂ ಡಿಆರ್ ಜಿ ನಕ್ಸಲೀಯರನ್ನು ಬೇಧಿಸಿತು. ಹಿಂದಿನ ದಿನ ಒಡಿಶಾ ಪೊಲೀಸರು, ಮಲ್ಕನ್ ಗಿರಿಯಲ್ಲಿ ಸುಕ್ಮಾ ಗಡಿ ದಾಟಲು ಯತ್ನಿಸಿದ ಒಂದು ಗುಂಪನ್ನು ತಡೆದಿದ್ದರು. ಇದರಲ್ಲಿ ಒಬ್ಬ ಹತ್ಯೆಗೀಡಾಗಿದ್ದು, ಇತರರು ಚದುರಿ ಹೋಗಿದ್ದರು.