ಪರೀಕ್ಷಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ ಕೇಂದ್ರ ಸರಕಾರ

Update: 2024-06-22 07:28 GMT

Photo: PTI

ಹೊಸದಿಲ್ಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿನ ಕಾನೂನನ್ನು ಕೇಂದ್ರ ಸರ್ಕಾರ ಶುಕ್ರವಾರದಿಂದ ಜಾರಿಗೆ ತಂದಿದೆ. ಈ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ಸಾರ್ವಜನಿಕ ಪರೀಕ್ಷೆ (ಅಕ್ರಮ ವಿಧಾನ ತಡೆ) ಕಾಯ್ದೆ- 2024 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿ ನಾಲ್ಕು ತಿಂಗಳ ಬಳಿಕ ಸಿಬ್ಬಂದಿ ಸಚಿವಾಲಯ ಶುಕ್ರವಾರ ರಾತ್ರಿ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಜೂನ್ 21ರಿಂದ ಇದು ಜಾರಿಗೆ ಬರಲಿದೆ.

ಯುಜಿಸಿ-ನೆಟ್ 2024ರ ಪ್ರಶ್ನೆಪತ್ರಿಕೆ ವಿವಾದ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಸಂಬಂಧ ಸಿಬಿಐ ತನಿಖೆಗೆ ಗುರುವಾರ ಆದೇಶ ನೀಡಿದ ಬೆನ್ನಲ್ಲೇ ಈ ಕಾನೂನು ಜಾರಿಗೊಳಿಸಿರುವುದು ವಿಶೇಷ ಮಹತ್ವ ಪಡೆದಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ವಿರೋಧ ಪಕ್ಷಗಳು ದೂರು ನೀಡಿವೆ. ಇದರ ಫಲಿತಾಂಶವನ್ನು ಜೂನ್ 4ರಂದು ಪ್ರಕಟಿಸಲಾಗಿತ್ತು.

ಈ ಕಾನೂನು ಯಾವಾಗ ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದ ಸಂದರ್ಭದಲ್ಲಿ ಕಾನೂನು ಸಚಿವಾಲಯ ಈ ಸಂಬಂಧ ನಿಯಮಾವಳಿ ರೂಪಿಸುತ್ತದೆ ಎಂದು ಸಚಿವರು ತಿಳಿಸಿದ್ದರು. ಕಾಯ್ದೆಗೆ ಫೆಬ್ರುವರಿ 9ರಂದು ರಾಜ್ಯಸಭೆ ಒಪ್ಪಿಗೆ ನೀಡಿತ್ತು. ಲೋಕಸಭೆ ಫೆಬ್ರವರಿ 16ರಂದು ಇದನ್ನು ಅನುಮೋದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News