ಶೇ.62ರಷ್ಟು ಹೊಸ ಸೈನಿಕ ಶಾಲೆಗಳನ್ನು ಸಂಘ ಪರಿವಾರ, ಬಿಜೆಪಿ ರಾಜಕಾರಣಿಗಳು, ಮಿತ್ರರಿಗೆ ಹಸ್ತಾಂತರಿಸಿದ ಕೇಂದ್ರ: ವರದಿ
ಹೊಸದಿಲ್ಲಿ: ಕೇಂದ್ರ ಸರಕಾರವು 2021ರಲ್ಲಿ ದೇಶದಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಖಾಸಗಿಯವರಿಗೆ ಅವಕಾಶವನ್ನು ಕಲ್ಪಿಸಿತ್ತು. ಸರಕಾರವು ಆ ವರ್ಷದ ಮುಂಗಡಪತ್ರದಲ್ಲಿ ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿತ್ತು. ರಕ್ಷಣಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆ ಸೈನಿಕ ಸ್ಕೂಲ್ಸ್ ಸೊಸೈಟಿ (ಎಸ್‌ಎಸ್‌ಎಸ್)ಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಈವರೆಗೆ ಮಾಡಿಕೊಂಡಿರುವ 40 ಸೈನಿಕ ಶಾಲೆ ಒಪ್ಪಂದಗಳಲ್ಲಿ ಕನಿಷ್ಠ ಶೇ.62ರಷ್ಟು ಸಂಘ ಪರಿವಾರ ಸಂಘಟನೆಗಳು, ಬಿಜೆಪಿ ರಾಜಕಾರಣಿಗಳು, ಬಿಜೆಪಿಯ ರಾಜಕೀಯ ಮಿತ್ರಪಕ್ಷಗಳು, ಸ್ನೇಹಿತರು, ಹಿಂದುತ್ವ ಸಂಘಟನೆಗಳು, ವ್ಯಕ್ತಿಗಳು ಮತ್ತು ಇತರ ಹಿಂದು ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಶಾಲೆಗಳಿಗೆ ನೀಡಲಾಗಿದೆ. ಕೇಂದ್ರ ಸರಕಾರದ ಪತ್ರಿಕಾ ಪ್ರಕಟಣೆಗಳು ಮತ್ತು ಆರ್‌ಟಿಐ ಅರ್ಜಿಗಳಿಗೆ ಉತ್ತರಗಳಿಂದ ಸಂಗ್ರಹಿತ ಮಾಹಿತಿಗಳ ವಿಶ್ಲೇಷಣೆಯ ಮೂಲಕ ತನಿಖಾ ಸುದ್ದಿಸಂಸ್ಥೆ ‘reporters-collective.in’ ನ ಆಸ್ಥಾ ಸವ್ಯಸಾಚಿ ಈ ಕಳವಳಕಾರಿ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಭೂಮಿ, ಭೌತಿಕ ಮತ್ತು ಐಟಿ ಮೂಲಸೌಕರ್ಯ, ಹಣಕಾಸು ಸಂಪನ್ಮೂಲಗಳು, ಸಿಬ್ಬಂದಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಸ್‌ಎಸ್‌ಎಸ್ ನಿರ್ದಿಷ್ಟ ಪಡಿಸಿರುವ ಮೂಲಸೌಕರ್ಯವನ್ನು ಹೊಂದಿರುವ ಯಾವುದೇ ಶಾಲೆಯನ್ನು ಸಂಭಾವ್ಯ ಹೊಸ ಸೈನಿಕ ಶಾಲೆಗಳಲ್ಲಿ ಒಂದಾಗಿ ಅನುಮೋದಿಸಬಹುದು. ಅನುಮೋದನೆ ನೀತಿಯ ಪ್ರಕಾರ ಮೂಲಭೂತ ಸೌಕರ್ಯವು ಶಾಲೆಯನ್ನು ಅನುಮೋದನೆಗೆ ಅರ್ಹವಾಗಿಸುವ ಏಕೈಕ ನಿರ್ದಿಷ್ಟ ಮಾನದಂಡವಾಗಿದೆ. ಇದು ಸಂಘ ಪರಿವಾರದೊಂದಿಗೆ ಮತ್ತು ಅಂತಹುದೇ ಸಿದ್ಧಾಂತಗಳನ್ನು ಹೊಂದಿರುವ ಸಂಸ್ಥೆಗಳೊಂದಿಗೆ ನಂಟು ಹೊಂದಿರುವ ಶಾಲೆಗಲು ಎಸ್‌ಎಸ್‌ಎಸ್‌ನಿಂದ ಅನುಮತಿಯನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿದೆ.
ಹೊಸ ಪಿಪಿಪಿ ಮಾದರಿಯು ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಳನ್ನು ಹೆಚ್ಚಿಸುತ್ತದೆ ಎಂದು ಸರಕಾರವು ನಿರೀಕ್ಷಿಸಿರುವಾಗ ಮಿಲಿಟರಿ ಪರಿಸರ ವ್ಯವಸ್ಥೆಯೊಳಗೆ ರಾಜಕಾರಣಿಗಳು ಮತ್ತು ಬಲಪಂಥೀಯ ಸಂಸ್ಥೆಗಳನ್ನು ತರುವ ಉಪಕ್ರಮವು ಕಳವಳಗಳನ್ನು ಹುಟ್ಟು ಹಾಕಿದೆ.
ಸೈನಿಕ ಶಾಲಾ ಶಿಕ್ಷಣ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿಯವರು ಎಸ್‌ಎಸ್‌ಎಸ್ ಜೊತೆ ಸಂಯೋಜನೆ ಹೊಂದಲು,ಭಾಗಶಃ ಹಣಕಾಸು ನೆರವು ಪಡೆಯಲು ಮತ್ತು ತಮ್ಮ ಶಾಖೆಗಳನ್ನು ನಡೆಸಲು ಸರಕಾರವು ಅವಕಾಶ ನೀಡಿದೆ.
12ರವರೆಗೆ ತರಗತಿಗಳನ್ನು ಹೊಂದಿರುವ ಶಾಲೆಗೆ ಎಸ್‌ಎಸ್ ಎಸ್ ವಾರ್ಷಿಕ ಗರಿಷ್ಠ 1.2 ಕೊ.ರೂ.ಗಳನ್ನು ಒದಗಿಸುತ್ತಿದ್ದು,ಇದನ್ನು ವಿದ್ಯಾರ್ಥಿಗಳಿಗೆ ಭಾಗಶಃ ಹಣಕಾಸು ನೆರವನ್ನಾಗಿ ನೀಡಲಾಗುತ್ತದೆ. ಶಾಲೆಗಳಿಗೆ ನೀಡಲಾಗುವ ಇತರ ಸೌಲಭ್ಯಗಳಲ್ಲಿ 12 ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ವಾರ್ಷಿಕ 10 ಲಕ್ಷ ರೂ.ಗಳ ತರಬೇತಿ ಅನುದಾನವು ಸೇರಿದೆ.
ಸರಕಾರದ ಬೆಂಬಲ ಮತ್ತುಪ್ರೋತ್ಸಾಹದ ಹೊರತಾಗಿಯೂ ಹಿರಿಯ ಮಾಧ್ಯಮಿಕ ಶ್ರೇಣಿಗಳಿಗೆ ವಾರ್ಷಿಕ ಶುಲ್ಕವು ನಾಮಮಾತ್ರ 13,800 ರೂ.ಗಳಿಂದ 2,47,900 ರೂ.ವರೆಗೂ ಇದೆ ಎನ್ನುವುದನ್ನು ʼರಿಪೋರ್ಟಸ್ ಕಲೆಕ್ಟಿವ್ʼ ಕಂಡುಕೊಂಡಿದ್ದು, ಇದು ಹೊಸ ಸೈನಿಕ ಶಾಲೆಗಳ ಶುಲ್ಕಗಳಲ್ಲಿ ಗಮನಾರ್ಹ ಅಸಮಾನತೆಯನ್ನು ಸೂಚಿಸುತ್ತದೆ.
ಹೊಸ ಸೈನಿಕ ಶಾಲೆಗಳನ್ನು ಯಾರಿಗೆಲ್ಲ ಒಪ್ಪಿಸಲಾಗಿದೆ?
ವಿಶ್ವ ಹಿಂದು ಪರಿಷತ್‌ನ ಮಹಿಳಾ ಘಟಕ ದುರ್ಗಾವಾಹಿನಿಯ ಸ್ಥಾಪಕಿ ಹಾಗೂ ರಾಮಮಂದಿರ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿಂದು ರಾಷ್ಟ್ರವಾದಿ ಸಿದ್ಧಾಂತಿ ಸಾಧ್ವಿ ಋತಂಬರಾ ವಾರಣಾಸಿಯಲ್ಲಿ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆಯನ್ನು ಮತ್ತು ಸೋಲನ್‌ನಲ್ಲಿ ರಾಜ ಲಕ್ಷ್ಮಿ ಸೈನಿಕ ಶಾಲೆಯನ್ನು, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ರಾಜ್ಯದ ಏಕೈಕ ಸೈನಿಕ ಶಾಲೆಯಾಗಿರುವ ತವಾಂಗ್ ಪಬ್ಲಿಕ್ ಸ್ಕೂಲ್ ಅನ್ನು, ಬಿಜೆಪಿ ಮುಖಂಡ ಅಶೋಕ ಕುಮಾರ ಭವಸಂಗಭಾಯಿ ಚೌಧರಿ ಅಧ್ಯಕ್ಷರಾಗಿರುವ ದೂಧಸಾಗರ ಡೇರಿಯು ಗುಜರಾತಿನ ಮೆಹ್ಸಾನಾದಲ್ಲಿ ಶ್ರೀ ಮೋತಿಭಾಯಿ ಆರ್.ಚೌಧರಿ ಸಾಗರ ಸೈನಿಕ ಶಾಲೆಯನ್ನು, ಗುಜರಾತಿನ ಬನಾಸಕಾಂತಾದಲ್ಲಿ ಬನಾಸ್ ಡೇರಿಯಡಿ ಗಲ್ಬಾಭಾಯಿ ನಾನ್ಜಿಭಾಯಿ ಪಟೇಲ್ ಚ್ಯಾರಿಟೇಬಲ್ ಟ್ರಸ್ಟ್ ಗುಜರಾತನ ಬನಾಸ್ ಸೈನಿಕ ಶಾಲೆಯನ್ನು ನಡೆಸುತ್ತಿವೆ. ಟ್ರಸ್ಟ್ ಹಾಲಿ ಬಿಜೆಪಿ ಶಾಸಕ ಹಾಗೂ ಗುಜರಾತ ವಿಧಾನಸಭಾ ಸ್ಪೀಕರ್ ಶಂಕರ ಚೌಧರಿ ಅವರ ನೇತೃತ್ವದಲ್ಲಿದೆ.
ಉತ್ತರ ಪ್ರದೇಶದ ಇಟಾವಾದಲ್ಲಿ ಬಿಜೆಪಿ ಶಾಸಕಿ ಸರಿತಾ ಭದೌರಿಯಾ ಅಧ್ಯಕ್ಷತೆಯ ಮುನ್ನಾ ಸ್ಮತಿ ಸಂಸ್ಥಾನವು ಶಾಕುಂತಲಂ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು, ರಾಜಸ್ಥಾನದ ಬಿಜೆಪಿ ಶಾಸಕ ಮಹಂತ ಬಾಲನಾಥ ಯೋಗಿ ಅವರು ಹರ್ಯಾಣದ ರೋಹ್ಟಕ್‌ನಲ್ಲಿ ಈಗ ಸೈನಿಕ ಶಾಲೆಯಾಗಿರುವ ಶ್ರೀ ಬಾಬಾ ಮಸ್ತನಾಥ ಸನಿವಾಸ ಪಬ್ಲಿಕ್ ಶಾಲೆಯನ್ನು, 2019ರಲ್ಲಿ ಬಿಜೆಪಿಗೆ ಸೇರಿದ್ದ ಮಾಜಿ ಕಾಂಗ್ರೆಸ್ ಶಾಸಕ ರಾಮಕೃಷ್ಣ ವಿಖೆ ಪಾಟೀಲ್ ಅವರು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಪದ್ಮಶ್ರೀ ಡಾ.ವಿಠಲರಾವ್ ವಿಖೆ ಪಾಟೀಲ್ ಸ್ಕೂಲ್‌ನ್ನು ನಡೆಸುತ್ತಿದ್ದಾರೆ.
ಇವು ಕೆಲವು ನಿದರ್ಶನಗಳು ಮಾತ್ರ. ಬಿಜೆಪಿಗೆ ನಿಕಟವಾಗಿರುವ ಅದಾನಿ ಗ್ರೂಪ್‌ನಡಿಯ ಅದಾನಿ ಕಮ್ಯುನಿಟಿ ಎಂಪವರ್‌ಮೆಂಟ್ ಫೌಂಡೇಶನ್ ಕೂಡ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಅದಾನಿ ವರ್ಲ್ಡ್ ಸ್ಕೂಲ್ ಹೆಸರಿನಲ್ಲಿ ಒಂದು ಸೈನಿಕ ಶಾಲೆಯನ್ನು ನಡೆಸುತ್ತಿದೆ.
ಕೇಸರೀಕರಣದ ಅಪಾಯ
ಬಲಪಂಥೀಯ ಸಿದ್ಧಾಂತಿಗಳಾದ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸೈನಿಕ ಶಾಲೆಗಳನ್ನು ನಡೆಸುತ್ತಿರುವುದು ಹೊಸ ನೀತಿಬದಲಾವಣೆಗಳು ಹುಟ್ಟು ಹಾಕಿರುವ ಕಳವಳವಾಗಿದೆ.
‘‘ಇದು ಸ್ಪಷ್ಟವಾಗಿದೆ. ‘ಅವರು ಎಳೆಯರಾಗಿದ್ದಾಗಲೇ ಅವರನ್ನು ಹಿಡಿದುಕೊಳ್ಳಿ’ ಎನ್ನುವುದು ಇಲ್ಲಿಯ ಪರಿಕಲ್ಪನೆಯಾಗಿದೆ. ಇದು ಸಶಸ್ತ್ರ ಪಡೆಗಳಿಗೆ ಒಳ್ಳೆಯದಲ್ಲ’’ಎಂದು ಮಾಜಿ ಲೆಫ್ಟಿನಂಟ್ ಜನರಲ್ ಪ್ರಕಾಶ ಮೆನನ್ ಅಭಿಪ್ರಾಯಿಸಿದ್ದಾರೆ. ಬಲಪಂಥೀಯ ಸಿದ್ಧಾಂತವಾದಿಗಳಿಗೆ ಸೈನಿಕ ಶಾಲೆಗಳನ್ನು ಒಪ್ಪಿಸುವುದು ಸಶಸ್ತ್ರ ಪಡೆಗಳ ಗುಣಲಕ್ಷಣಗಳು ಮತ್ತು ನೈತಿಕತೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿರುವ ವರು,ತನ್ಮೂಲಕ ಈ ಶಾಲೆಗಳು ಕೇಸರೀಕರಣದ ಅಪಾಯವನ್ನು ಎದುರಿಸುತ್ತಿವೆ ಎಂದು ಸೂಚಿಸಿದ್ದಾರೆ.
ಕೃಪೆ: reporters-collective.in