ಚುನಾವಣೆಗೆ ಸ್ಪರ್ಧಿಸಲು ಇರುವ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಇಳಿಸುವಂತೆ ಆಪ್ ನಾಯಕ ರಾಘವ್ ಛಡ್ಡಾ ಆಗ್ರಹ
ಹೊಸದಿಲ್ಲಿ: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಸ್ಪರ್ಧಿಸಲು ಇರುವ ಕನಿಷ್ಠ ವಯಸ್ಸನ್ನು 25 ವರ್ಷಗಳಿಂದ 21 ವರ್ಷಕ್ಕೆ ಇಳಿಸುವಂತೆ ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಗುರುವಾರ ಆಗ್ರಹಿಸಿದ್ದಾರೆ. ಇದು ಯುವಕರು ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಅನುಕೂಲವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
"ಭಾರತ ಅತ್ಯಂತ ಯುವದೇಶಗಳಲ್ಲಿ ಒಂದಾಗಿದ್ದು, ಶೇಕಡ 65ರಷ್ಟು ಮಂದಿ 35ಕ್ಕಿಂತ ಕೆಳ ವಯಸ್ಸಿನವರಿದ್ದಾರೆ. ಆದರೆ ನಮ್ಮದು ವೃದ್ಧ ರಾಜಕಾರಣಿಗಳಿಂದ ಕೂಡಿದ ಯುವ ದೇಶ. ಆದರೆ ನಮ್ಮ ಅಪೇಕ್ಷೆ ಇರುವುದು ನಮ್ಮ ದೇಶ ಯುವ ರಾಜಕಾರಣಿಗಳಿಂದ ಕೂಡಿದ ಯುವದೇಶವಾಗಬೇಕು ಎನ್ನುವುದು" ಎಂದು ರಾಜ್ಯಸಭೆಯಲ್ಲಿ ಅವರು ಹೇಳಿದರು. 25 ವರ್ಷಕ್ಕಿಂತ ಕೆಳ ವಯಸ್ಸಿನ ಯುವ ರಾಜಕಾರಣಿಗಳು ಶೇಕಡ 50ರಷ್ಟಾದರೂ ಇರಬೇಕು ಎಂದು ಅವರು ಆಗ್ರಹಿಸಿದರು.
ಮೊದಲ ಲೋಕಸಭೆಗೆ ಆಯ್ಕೆಯಾಗಿರುವ ಶೇಕಡ 29ರಷ್ಟು ಮಂದಿ 40ಕ್ಕಿಂತ ಕಡಿಮೆ ವಯಸ್ಸಿನವರು. ಆದರೆ ಕಳೆದ ಲೋಕಸಭೆಗೆ ಆಯ್ಕೆಯಾಗಿರುವವರಲ್ಲಿ ಈ ವಯೋಮಾನದ ರಾಜಕಾರಣಿಗಳು ಕೇವಲ ಶೇಕಡ 12ರಷ್ಟು ಮಾತ್ರ. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯಸ್ಸನ್ನು 25ರಿಂದ 21ಕ್ಕೆ ಇಳಿಸುವಂತೆ ರಾಜ್ಯಸಭೆಯ ಅಧ್ಯಕ್ಷರ ಮೂಲಕ ನಾನು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ" ಎಂದು ಹೇಳಿದರು.