ಹಡಗಿನಲ್ಲಿ ಹೃದಯಾಘಾತಕ್ಕೊಳಗಾಗಿದ್ದ ತನ್ನ ನಾಗರಿಕನನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಶ್ಲಾಘಿಸಿದ ಚೀನಾ
ಹೊಸದಿಲ್ಲಿ: ಮುಂಬೈ ಕರಾವಳಿಯಿಂದ ಸುಮಾರು 200 ಕಿಮೀ ದೂರದಲ್ಲಿದ್ದ ಪನಾಮಾ ಧ್ವಜ ಹೊಂದಿದ್ದ ಸಂಶೋಧನಾ ಹಡಗು ಎಂವಿ ಡೊಂಗ್ ಫಾಂಗ್ ಕನ್ ಟನ್‌ನಲ್ಲಿ ಹೃದಯಾಘಾತಕ್ಕೊಳಗಾಗಿದ್ದ ಚೀನೀ ನಾಗರಿಕರೊಬ್ಬರನ್ನು ರಾತ್ರಿ ಹೊತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಚೀನಾದ ದೂತಾವಾಸ ಶ್ಲಾಘಿಸಿದೆ.
ಆಗಸ್ಟ್ 16 ಹಾಗೂ 17ರ ನಡುವಿನ ರಾತ್ರಿ ವೇಳೆ ಹಡಗಿನಲ್ಲಿದ್ದ ಚೀನೀ ನಾಗರಿಕ ಯಿನ್ ವೀಗ್ಯಾಂಗ್ ಎಂಬವರಿಗೆ ಹೃದಯಾಘಾತವಾಗಿದೆ, ತಕ್ಷಣ ವೈದ್ಯಕೀಯ ನೆರವು ಬೇಕೆಂಬ ಮಾಹಿತಿಯನ್ನು ಮುಂಬೈನ ಮೆರಿಟೈಮ್ ರೆಸ್ಕ್ಯೂ ಕೊ-ಆರ್ಡಿನೇಶನ್ ಸೆಂಟರ್ ಪಡೆಯುತ್ತಿದ್ದಂತೆಯೇ ತಕ್ಷಣ ಟೆಲಿಮೆಡಿಸಿನ್ ಸಲಹೆ ನೀಡಲಾಗಿತ್ತು. ಈ ಹಡಗು ಚೀನಾದಿಂದ ಯುಎಇಗೆ ಸಾಗುತ್ತಿತ್ತು.
ನಂತರ ಪ್ರತಿಕೂಲ ಹವಾಮಾನದ ಹೊರತಾಗಿಯೂ ಕೋಸ್ಟ್ ಗಾರ್ಡ್‌ನ ಸಿಜಿ ಎಎಲ್‌ಎಚ್ ಎಂಕೆ ಹೆಲಿಕಾಪ್ಟರ್ ಮೂಲಕ ರೋಗಿಯನ್ನು ತಕ್ಷಣ ಸಾಗಿಸಿ ವೈದ್ಯಕೀಯ ನೆರವು ನೀಡಲಾದ ಪರಿಣಾಮ ಚೀನೀ ನಾಗರಿಕನ ಪ್ರಾಣ ಉಳಿಯುಂತಾಗಿತ್ತು.
ಈ ಹಿನ್ನೆಲೆಯಲ್ಲಿ ಚೀನೀ ದೂತಾವಾಸ ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಶ್ಲಾಘಿಸಿದೆ.