VHP ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ: ನ್ಯಾ. ಶೇಖರ್ ಯಾದವ್ ವಿರುದ್ಧ ಸಿಜೆಐಗೆ ದೂರು ನೀಡಿದ ಸಿಜೆಎಆರ್
ಹೊಸದಿಲ್ಲಿ: ಇತ್ತೀಚೆಗೆ ನಡೆದ ವಿಶ್ವಿ ಹಿಂದೂ ಪರಿಷತ್ (VHP) ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್ ನ ಹಾಲಿ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಮಾಡಿರುವ ಭಾಷಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಂತರಿಕ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾರಿಗೆ ಕ್ಯಾಂಪೈನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ ಆ್ಯಂಡ್ ರಿಫಾರ್ಮ್ಸ್ (ಸಿಜೆಎಆರ್) ಇಂದು ಪತ್ರ ಬರೆದಿದೆ.
“ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ವಿವಾದಾತ್ಮಕ ಭಾಷಣ ಮಾಡಿರುವ ನ್ಯಾ. ಶೇಖರ್ ಯಾದವ್ ವರ್ತನೆಯಿಂದ, ನ್ಯಾಯಾಂಗದ ಸ್ವಾಯತ್ತತೆ ಮತ್ತು ತಟಸ್ಥತೆ ಕುರಿತು ಬಹುತೇಕ ಪ್ರಜೆಗಳಲ್ಲಿ ಅನುಮಾನ ಸೃಷ್ಟಿಯಾಗಿದೆ. ಈ ಭಾಷಣಕ್ಕೆ ದಕ್ಕಿರುವ ಪ್ರಚಾರವನ್ನು ಪರಿಗಣಿಸಿ, ಬಲಿಷ್ಠ ಸಾಂಸ್ಥಿಕ ಪ್ರತಿಕ್ರಿಯೆ ಅಗತ್ಯವಾಗಿದೆ” ಎಂದು ಸಿಜೆಎಆರ್ ಆಗ್ರಹಿಸಿದೆ.
“ಮುಸ್ಲಿಂ ಸಮುದಾಯದ ವಿರುದ್ಧ ನ್ಯಾ. ಯಾದವ್ ಬಳಸಿರುವ ಕ್ಷಮೆಗೆ ಅರ್ಹವಲ್ಲದ ಮತ್ತು ಪ್ರಜ್ಞಾರಹಿತ ನಿಂದನೆಗಳಿಂದ ನ್ಯಾಯಾಂಗದ ಘನತೆಗೆ ಧಕ್ಕೆಯುಂಟಾಗಿದೆ” ಎಂದೂ ಅದು ಅಸಮಾಧಾನ ವ್ಯಕ್ತಪಡಿಸಿದೆ.
ಮುಸ್ಲಿಂ ಸಮುದಾಯದ ವಿರುದ್ಧ ನ್ಯಾ. ಯಾದವ್ ಬಳಸಿರುವ ಭಾಷೆಯ ಸ್ವರೂಪ ಹಾಗೂ ಭಾಷಣದ ಸಾರವು ನ್ಯಾಯಾಂಗ ಅನುಚಿತತೆಯಾಗುತ್ತದೆ. ಅಲ್ಲದೆ, ಈ ಭಾಷಣವು ಸಂವಿಧಾನದ ವಿಧಿ 12, 21, 25, 26 ಹಾಗೂ ಸಂವಿಧಾನದ ಪೀಠಿಕೆಯನ್ನು ಉಲ್ಲಂಘಿಸುತ್ತದೆ ಎಂದೂ ಸಿಜೆಎಆರ್ ತನ್ನ ಪತ್ರದಲ್ಲಿ ಪ್ರತಿಪಾದಿಸಿದೆ.
“ಬಲಪಂಥೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹಾಗೂ ಅವರ ಹೇಳಿಕೆಗಳೆರಡೂ ಸಂವಿಧಾನದ ವಿಧಿಗಳಾದ 14, 21, 25, 26 ಹಾಗೂ ಸಂವಿಧಾನ ಪೀಠಿಕೆಯ ನಿರ್ದಾಕ್ಷಿಣ್ಯ ಉಲ್ಲಂಘನೆಯಾಗಿದೆ. ಅವು ತಾರತಮ್ಯದಿಂದ ಕೂಡಿದ್ದು, ನಮ್ಮ ಸಂವಿಧಾನದಲ್ಲಿ ಅಳವಡಿಕೆಯಾಗಿರುವ ಕಾನೂನುಗಳಡಿಯ ಮೂಲಭೂತ ಜಾತ್ಯತೀತತೆ ಮತ್ತು ಸಮಾನತೆ ಸಿದ್ಧಾಂತಗಳ ಉಲ್ಲಂಘನೆಯಾಗಿದೆ” ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.
ಹೀಗಾಗಿ, ನ್ಯಾ. ಶೇಖರ್ ಯಾದವ್ ವಿರುದ್ಧ ಆಂತರಿಕ ವಿಚಾರಣಾ ಸಮಿತಿ ರಚಿಸಬೇಕು ಹಾಗೂ ಅವರನ್ನು ನ್ಯಾಯಾಂಗ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಸಿಜೆಎಆರ್ ಆಗ್ರಹಿಸಿದೆ.