ಕೇರಳದ ಕಾಲೇಜಿನಲ್ಲಿ ಕಾಲ್ತುಳಿತ: ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗಿದ್ದಕ್ಕೆ ಮಾಜಿ ಪ್ರಾಂಶುಪಾಲ, ಇಬ್ಬರು ಅಧ್ಯಾಪಕರ ವಿರುದ್ಧ ಪ್ರಕರಣ ದಾಖಲು

Update: 2024-01-07 14:53 GMT

Photo : PTI 

ಕೊಚ್ಚಿ: ಕಳೆದ ವರ್ಷದ ನವಂಬರ್ ನಲ್ಲಿ ವಾರ್ಷಿಕ ಟೆಕ್ ಉತ್ಸವದ ಸಂದರ್ಭ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ (ಕ್ಯುಸಾಟ್)ಯ ಸ್ಕೂಲ್ ಆಫ್ ಇಂಜಿನಿಯರಿಂಗ್ ನ ಮಾಜಿ ಪ್ರಾಂಶುಪಾಲ ದೀಪಕ್ ಕುಮಾರ್ ಸಾಹು ಮತ್ತು ಇಬ್ಬರು ಅಧ್ಯಾಪಕರ ವಿರುದ್ಧ ಕೇರಳ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಮೂವರ ವಿರುದ್ಧ ಐಪಿಸಿಯ ಕಲಂ 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿ ಆರೋಪವನ್ನು ಹೊರಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಕ್ಯುಸಾಟ್ ನ ಬಯಲು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಗೀತ ಉತ್ಸವದಲ್ಲಿ ಖ್ಯಾತ ಗಾಯಕಿ ನಿಕಿತಾ ಗಾಂಧಿಯರು ಹಾಡಲಿದ್ದರು. ಅದಕ್ಕೂ ಮುನ್ನ ಸಂಭವಿಸಿದ್ದ ಕಾಲ್ತುಳಿತದಲ್ಲಿ ನಾಲ್ವರು ಮೃತಪಟ್ಟು, 60 ಜನರು ಗಾಯಗೊಂಡಿದ್ದರು.

ಸಾಹು ಮತ್ತು ಅಧ್ಯಾಪಕರು ಗಂಭೀರ ಲೋಪಗಳನ್ನು ಎಸಗಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡ ನಂತರ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದರು. ಪೋಲಿಸರು ಲೋಪದೋಷಗಳನ್ನು ಉಲ್ಲೇಖಿಸಿ ವಿವರವಾದ ವರದಿಯನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ವಾರ್ಷಿಕ ಟೆಕ್ ಉತ್ಸವವು ನ.24ರಿಂದ ನ.26ರವರೆಗೆ ನಡೆದಿತ್ತು. ಒಂದು-ಒಂದೂವರೆ ಸಾವಿರ ಜನರಿಗೆ ಆಸನ ಸಾಮರ್ಥ್ಯ ಹೊಂದಿದ್ದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಾರ್ಷಿಕ ಟೆಕ್ ಉತ್ಸವದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕೆಲವು ವೈಫಲ್ಯಗಳು ಕಾರಣವಾಗಿದ್ದವು ಎನ್ನುವುದು ಸ್ಪಷ್ಟವಾಗಿದೆ ಮತ್ತು ಇಂತಹ ದುರಂತವು ಎಂದಿಗೂ ಸಂಭವಿಸಬಾರದಿತ್ತು ಎಂದು ಕೇರಳ ಉಚ್ಛ ನ್ಯಾಯಾಲಯವು ಹೇಳಿತ್ತು.

ಮೃತ ನಾಲ್ವರ ಪೈಕಿ ಅತುಲ್ ಥಂಪಿ (23), ಸಾರಾ ಥಾಮಸ್ (19) ಮತ್ತು ಆ್ಯನ್ ರಿಫ್ತಾ ರಾಯ್ (20) ಕ್ಯುಸಾಟ್ ವಿದ್ಯಾರ್ಥಿಗಳಾಗಿದ್ದರೆ, ಪಾಲಕ್ಕಾಡ್ ನಿವಾಸಿ ಇಲೆಕ್ಟ್ರಿಷಿಯನ್ ಆಲ್ವಿನ್ ಆಕಸ್ಮಿಕವಾಗಿ ಉತ್ಸವಕ್ಕೆ ಆಗಮಿಸಿದ್ದರು.

ವಿವಿಗಳು ಮತ್ತು ಕಾಲೇಜುಗಳು ಸೇರಿದಂತೆ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುವುದು ಮತ್ತು ಇಂತಹ ಅವಘಡಗಳನ್ನು ತಡೆಯಲು ಅವುಗಳನ್ನು ಕಾಲಕಾಲಕ್ಕೆ ನವೀಕರಿಸಲಾಗುವುದು ಎಂದು ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್ ಅವರು ದುರಂತದ ಬಳಿಕ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News