ಕಾಂಗ್ರೆಸ್ ನಾಯಕರ ಮೇಲೆ ಮಧ್ಯರಾತ್ರಿ ಪೊಲೀಸ್ ದಾಳಿ : ಪಾಲಕ್ಕಾಡ್ ಜಿಲ್ಲಾಧಿಕಾರಿಯಿಂದ ವರದಿ ಕೋರಿದ ಚುನಾವಣಾ ಆಯೋಗ
ತಿರುವನಂತಪುರಂ: ಬುಧವಾರ ಮಧ್ಯರಾತ್ರಿ ಕಾಂಗ್ರೆಸ್ ನಾಯಕರೊಬ್ಬರ ಮೇಲೆ ನಡೆದಿರುವ ಪೊಲೀಸ್ ದಾಳಿಯ ಕುರಿತು ವರದಿ ಸಲ್ಲಿಸುವಂತೆ ಪಾಲಕ್ಕಾಡ್ ಜಿಲ್ಲಾಧಿಕಾರಿಗೆ ಚುನಾವಣಾ ಆಯೋಗ ಸೂಚಿಸಿದೆ.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ದಾಳಿ, ಅದರ ಸನ್ನಿವೇಶಗಳು, ಅದರ ಪರಿಣಾಮ ಹಾಗೂ ಯಾವುದಾದರೂ ಸಾಧ್ಯವಿರುವ ಮುಂದಿನ ಕ್ರಮಗಳ ಬಗ್ಗೆ ವಿವರಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ.
ನವೆಂಬರ್ 20ರ ಉಪ ಚುನಾವಣೆಗೂ ಮುನ್ನ, ಕಾಂಗ್ರೆಸ್ ಮಹಿಳಾ ನಾಯಕಿಯರಾದ ಬಿಂದು ಕೃಷ್ಣ ಹಾಗೂ ಶಾನಿಮೋಲ್ ಉಸ್ಮಾನ್ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿಗಳ ಮೇಲೆ ಬುಧವಾರ ತಡ ರಾತ್ರಿ ಪೊಲೀಸರು ತಡರಾತ್ರಿ ದಾಳಿ ನಡೆಸಿದ್ದರಿಂದ, ರಾಜಕೀಯ ವಾಕ್ಸಮರ ಸ್ಫೋಟಗೊಂಡಿತ್ತು.
ಚುನಾವಣೆಯ ಸಂದರ್ಭದಲ್ಲಿ ಕಪ್ಪು ಹಣದ ಚಲಾವಣೆಯನ್ನು ತಡೆಗಟ್ಟಲು ದೈನಂದಿನ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ತಡ ರಾತ್ರಿ ಶೋಧ ಕಾರ್ಯ ಕೈಗೊಂಡಿದ್ದರು ಎಂದು ಹೇಳಲಾಗಿದೆ. ಆದರೆ, ಪೊಲೀಸರು ಪಕ್ಷಪಾತಿಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿಗರು ತಕ್ಷಣವೇ ಪ್ರತಿಭಟನೆ ನಡೆಸಿದ್ದರು.
ಈ ನಡುವೆ, ಚುನಾವಣಾ ಆಯೋಗದ ಮೊರೆ ಹೋಗಿದ್ದ ವಿಧಾನಸಭಾ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ರಾಜ್ಯ ಸರಕಾರವು ಯುಡಿಎಫ್ ಮೈತ್ರಿಕೂಟ ಹಾಗೂ ಅದರ ಅಭ್ಯರ್ಥಿ ರಾಹುಲ್ ಮಂಕೂಟಟ್ಹಿಲ್ ಗೆ ಕಳಂಕ ಹಚ್ಚಲು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದರು.