ಬ್ಯಾಂಕ್‌ ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿದೆ: ಕಾಂಗ್ರೆಸ್‌ ಬೆಂಬಲಿತ ಕೇರಳದ ಜೈಹಿಂದ್‌ ವಾಹಿನಿ ಆರೋಪ

Update: 2024-02-17 10:19 GMT

ತಿರುವನಂತಪುರಂ: ಕಾಂಗ್ರೆಸ್‌ ಪಕ್ಷದ ಮುಖ್ಯ ಬ್ಯಾಂಕ್‌ ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿ ನಂತರ ಮರುಸ್ಥಾಪಿಸಿದ ವಿಚಾರ ಶುಕ್ರವಾರ ಸುದ್ದಿಯಾಗಿದ್ದರೆ ಇಂದು ಕಾಂಗ್ರೆಸ್‌ ಬೆಂಬಲಿತ ಕೇರಳದ ಟಿವಿ ವಾಹಿನಿ ಜೈಹಿಂದ್‌ ಟಿವಿ, ತನ್ನ ಬ್ಯಾಂಕ್‌ ಖಾತೆಗಳನ್ನು ತೆರಿಗೆ ಪ್ರಾಧಿಕಾರಗಳು ಸ್ಥಗಿತಗೊಳಿಸಿವೆ ಎಂದು ಆರೋಪಿಸಿದೆ.

ಸುದ್ದಿ ವಾಹಿನಿಯ ಮಾತೃ ಸಂಸ್ಥೆಯಾಗಿರುವ ಭಾರತ್‌ ಬ್ರಾಡ್‌ಕಾಸ್ಟಿಂಗ್‌ ಕಂಪೆನಿಯು ಕೇಂದ್ರ ಸರ್ಕಾರಕ್ಕೆ ಬಾಕಿ ಹೊದಿರುವ ತೆರಿಗೆ ಮೊತ್ತವನ್ನು ವಸೂಲು ಮಾಡುವಂತೆ ಸೂಚಿಸಿ ಸೆಂಟ್ರಲ್‌ ಜಿಎಸ್‌ಟಿ ಮತ್ತು ಕೇಂದ್ರ ಎಕ್ಸೈಸ್‌ ಸಹಾಯ ಆಯುಕ್ತರ ಕಚೇರಿಯು ಎರಡು ಪ್ರಮುಖ ಖಾಸಗಿ ಬ್ಯಾಂಕ್‌ಗಳಿಗೆ ನೋಟಿಸ್‌ ಜಾರಿಗೊಳಿಸಿದೆ ಎಂದು ಜೈಹಿಂದ್ ಟಿವಿ ಹೇಳಿದೆ.

ಈ ವಾಹಿನಿಯಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾಡಿರುವ ಹೂಡಿಕೆಗಳ ವಿವರ ಕೋರಿ ಸಿಬಿಐ ಇತ್ತೀಚೆಗೆ ಜೈಹಿಂದ್‌ ಟಿವಿಗೆ ನೋಟಿಸ್‌ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೇವಾ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಏಳು ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಈ ಕ್ರಮದಿಂದ ವಾಹಿನಿಯ ದೈನಂದಿನ ಚಟುವಟಿಕೆಗಳಿಗೆ ತೊಡಕುಂಟಾಗಿದೆ ಎಂದು ವಾಹಿನಿ ಆರೋಪಿಸಿದೆ.

ಪ್ರಕರಣವು ಹೈಕೋರ್ಟಿನಲ್ಲಿ ಬಾಕಿಯಿರುವಾಗ ತೆರಿಗೆ ಪ್ರಾಧಿಕಾರಗಳ ಕ್ರಮ ಸಂಪೂರ್ಣವಾಗಿ ಅನಿರೀಕ್ಷಿತ ಎಂದು ವಾಹಿನಿಯ ಆಡಳಿತ ನಿರ್ದೇಶಕರಾದ ಬಿ ಎಸ್‌ ಶಿಜು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News