‘ಮಾಲೆಗಾಂವ್ ಸ್ಫೋಟ’ ಪ್ರಕರಣ ಆಧಾರಿತ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಕಾರ
ಹೊಸದಿಲ್ಲಿ : 2008ರ ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಆಧರಿಸಿದ್ದಾಗಿ ಹೇಳಲಾದ ‘ಮ್ಯಾಚ್ ಫಿಕ್ಸಿಂಗ್- ದಿ ನೇಶನ್ ಎಟ್ ಸ್ಟೇಕ್’ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಇದೊಂದು ಕಾಲ್ಪನಿಕ ಕಥಾವಸ್ತುವುಳ್ಳ ಚಿತ್ರವೆಂದು ತನಗೆ ಮನದಟ್ಟಾಗಿದ್ದು ಅದರ ಬಿಡುಗಡೆಗೆ ತಡೆಯಾಜ್ಞೆ ನೀಡಲಾಗದೆಂದು ನ್ಯಾಯಾಲಯವು ತಿಳಿಸಿದೆ.
ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಪ್ರಕರಣದ ಆರೋಪಿ ಲೆ.ಕ.ಪ್ರಸಾದ್ ಪುರೋಹಿತ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಿ.ಪಿ.ಕೊಲಬಾವಾಲಾ ಹಾಗೂ ಸೋಮಶೇಖರ್ ಸುಂದರೇಶನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತಳ್ಳಿಹಾಕಿದೆ.ಶುಕ್ರವಾರ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಕೇಸರಿ ಭಯೋತ್ಪಾದನೆ ಎಂಬುದಾಗಿ ಬಿಂಬಿಸಲಾಗಿದೆ. ಈ ಚಿತ್ರವು ತನ್ನ ವರ್ಚಸ್ಸಿಗೆ ಹಾನಿ ಮಾಡಿದೆಯೆಂದು ಪುರೋಹಿತ್ ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಚಿತ್ರದ ನಿರ್ಮಾಪಕರು ನಿರಾಕರಿಸಿದ್ದು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕ ಕೃತಿಯನ್ನು ಆಧರಿಸಿದ ಕಾಲ್ಪನಿಕ ಚಿತ್ರ ಇದಾಗಿದೆ ಎಂದು ವಾದಿಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿನ ಪಾತ್ರಗಳು ಮೃತ ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಯನ್ನು ಹೋಲುವುದಿಲ್ಲ ಹಾಗೂ ಕಾಲ್ಪನಿಕ ಕಥೆಯೆಂದು ಚಿತ್ರದ ಆರಂಭದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ.
ಉಭಯ ಕಕ್ಷಿದಾರರ ವಾದಗಳನ್ನು ಆಲಿಸಿದ ನ್ಯಾಯಪೀಠವು, ಚಿತ್ರದ ಆರಂಭದಲ್ಲಿ ಪ್ರದರ್ಶಿಸಲಾಗುವ ಹಕ್ಕುತ್ಯಾಗ (ಡಿಸ್‌ಕ್ಲೇಮರ್)ದ ವಿವರಣೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದ್ದು, ಅದಕ್ಕೆ ನಿರ್ಮಾಪಕರು ಸಮ್ಮತಿಸಿದ್ದಾರೆ.
ಈ ಚಿತ್ರವು ಕಾಲ್ಪನಿಕ ಕಥೆಯನ್ನು ಆಧರಿಸಿದ್ದಾಗಿರುವುದರಿಂದ ಅಂತಿಮ ಹಂತದಲ್ಲಿರುವ ಮಾಲೆಗಾಂವ್ ಸ್ಫೋಟ ಪ್ರಕರಣ ವಿಚಾರಣೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದೆಂದು ನ್ಯಾಯಾಲಯ ತಿಳಿಸಿದೆ. ಹೀಗಾಗಿ ಅರ್ಜಿದಾರರು ವ್ಯಕ್ತಪಡಿಸಿರುವ ಆತಂಕವು ತಪ್ಪುಗ್ರಹಿಕೆಯಿಂದ ಕೂಡಿದ್ದಾಗಿದೆಯೆಂದು ನ್ಯಾಯಮೂರ್ತಿಗಳಾದ ಬಿ.ಪಿ.ಕೊಲಬಾವಾಲಾ ಹಾಗೂ ಸೋಮಶೇಖರ್ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿದೆ.