ಮಣಿಪುರ | ಇನ್ನೂ 6 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳ ಕಾಯ್ದೆ ಮರುಹೇರಿಕೆ
ಹೊಸದಿಲ್ಲಿ : ಹಿಂಸಾಪೀಡಿತ ಜಿರಿಬಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳ) ಕಾಯ್ದೆ (ಎಎಫ್‌ಎಸ್‌ಪಿಎ)ಯನ್ನು ಕೇಂದ್ರ ಸರಕಾರ ಮರುಹೇರಿದೆ. ಈ ಕಾಯ್ದೆಯ ಅಡಿಯಲ್ಲಿ, ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪ್ರದೇಶವೊಂದನ್ನು ‘‘ತೊಂದರೆಪೀಡಿತ’’ ಎಂಬುದಾಗಿ ಘೋಷಿಸಲಾಗುತ್ತದೆ.
ಜನಾಂಗೀಯ ಸಂಘರ್ಷದಿಂದಾಗಿ ಅಲ್ಲಿ ನಿರಂತರವಾಗಿ ಸ್ಫೋಟಕ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಮರು ಹೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಸೂಚನೆಯೊಂದರಲ್ಲಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕಾಯ್ದೆಯನ್ನು ಮರುಹೇರಲಾಗಿರುವ ಪೊಲೀಸ್ ಠಾಣಾ ಪ್ರದೇಶಗಳೆಂದರೆ- ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮಲ್ ಮತ್ತು ಲಮ್‌ಸಂಗ್, ಇಂಫಾಲ ಪೂರ್ವ ಜಿಲ್ಲೆಯ ಲಮ್‌ಲೈ, ಜಿರಿಬಮ್ ಜಿಲ್ಲೆಯ ಜಿರಿಬಮ್, ಕಾಂಗ್‌ಪೊಕ್ಪಿ ಜಿಲ್ಲೆಯ ಲೈಮಖೊಂಗ್ ಮತ್ತು ಬಿಷ್ಣುಪುರ ಜಿಲ್ಲೆಯ ಮೊಯಿರಂಗ್.
ಇದಕ್ಕೂ ಮೊದಲು, ಅಕ್ಟೋಬರ್ ಒಂದರಂದು ಮಣಿಪುರ ಸರಕಾರವು 19 ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಇಡೀ ಮಣಿಪುರ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಮರುಹೇರಿತ್ತು. ಆ 19 ಪೊಲೀಸ್ ಠಾಣೆಗಳಲ್ಲಿ ಈ ಆರು ಪೊಲೀಸ್ ಠಾಣೆಗಳೂ ಸೇರಿವೆ.
ಸೋಮವಾರ ಭದ್ರತಾ ಪಡೆಗಳೊಂದಿಗೆ ನಡೆದ ಭೀಕರ ಕಾಳಗದಲ್ಲಿ 11 ಬಂಡುಕೋರರು ಮೃತರಾಗಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಜಿರಿಬಮ್ ಜಿಲ್ಲೆಯ ಒಂದು ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್‌ಪಿಎಫ್ ಶಿಬಿರದ ಮೇಲೆ ಆಧುನಿಕ ಶಸ್ತ್ರಗಳನ್ನು ಹೊಂದಿದ್ದ ಸೇನಾ ಸಮವಸ್ತ್ರದಲ್ಲಿದ್ದ ಬಂಡುಕೋರರು ಗುಂಡು ಹಾರಿಸಿದ ಬಳಿಕ ಸಂಘರ್ಷ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅದಾದ ಒಂದು ದಿನದ ಬಳಿಕ, ಅದೇ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಆರು ನಾಗರಿಕರನ್ನು ಸಶಸ್ತ್ರ ಬಂಡುಕೋರರು ಅಪಹರಿಸಿದ್ದಾರೆ.
ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಸ್ಫೋಟಿಸಿದ ಜನಾಂಗೀಯ ಸಂಘರ್ಷದಲ್ಲಿ ಈವರೆಗೆ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ.