ದಿಲ್ಲಿಯನ್ನು ಆವರಿಸಿದ ಮಲಿನಕಾರಿ ಹೊಗೆ | ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ

Update: 2024-11-14 15:18 GMT

PC : PTI 

ಹೊಸದಿಲ್ಲಿ : ಗುರುವಾರ ದಿಲ್ಲಿ ಮತ್ತು ಅದರ ಸುತ್ತಮುತ್ತಲಿನ ಹಲವಾರು ನಗರಗಳನ್ನು ಮಲಿನ ಹೊಗೆಯ ದಟ್ಟ ಪದರವೊಂದು ಆವರಿಸಿದೆ. ಇದರಿಂದಾಗಿ ವಿಮಾನ ಮತ್ತು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಜನರು ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದಾರೆ. ಮಾಲಿನ್ಯ ಸಂಬಂಧಿ ಸಮಸ್ಯೆಗಳೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಜನರ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ.

ದಿಲ್ಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಗುರುವಾರ 400ನ್ನು ದಾಟಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಆ್ಯಪ್ ಪ್ರಕಾರ, ಅತ್ಯಂತ ಕಳಪೆ ವಾಯು ಗುಣಮಟ್ಟವು ಪತ್ಪರ್‌ಗಂಜ್‌ನಲ್ಲಿ ದಾಖಲಾಗಿದೆ. ಅಲ್ಲಿನ ವಾಯು ಗುಣಮಟ್ಟ ಸೂಚ್ಯಂಕ ಗುರುವಾರ ಬೆಳಗ್ಗೆ 11 ಗಂಟೆಗೆ 470 ಎಂದು ದಾಖಲಾಗಿದೆ. ಇದು ‘‘ಸೀವಿಯರ್ ಪ್ಲಸ್’’ ವಿಭಾಗದಲ್ಲಿ ಬರುತ್ತದೆ.

ಇದೇ ಅವಧಿಯಲ್ಲಿ, ಆನಂದ ವಿಹಾರದಲ್ಲಿರುವ ವಾಯುಮಾಲಿನ್ಯ ನಿಗಾ ಕೇಂದ್ರದಲ್ಲಿ ಸೂಚ್ಯಂಕವು 470, ಅಶೋಕ ವಿಹಾರದಲ್ಲಿ 469, ಐಟಿಒದಲ್ಲಿ 417 ಮತ್ತು ರೋಹಿಣಿಯಲ್ಲಿ 451 ಆಗಿದೆ.

ಹೆಚ್ಚುತ್ತಿರುವ ವಾಯು ಮಾಲಿನ್ಯವು ಜನರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ ಎಂದು ದಿಲ್ಲಿಯ ಮೇದಾಂತ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಅರವಿಂದ ಕುಮಾರ್ ಹೇಳುತ್ತಾರೆ. ‘‘ಪ್ರತಿ ವರ್ಷವೂ ಇದೇ ಕತೆ’’ ಎಂದು ಅವರು ನುಡಿದರು.

ದಿಲ್ಲಿಯಲ್ಲಿ ರಸ್ತೆ ಧೂಳು ಮತ್ತು ತ್ಯಾಜ್ಯ ಉತ್ಪಾದನೆಯನ್ನು ನಿಭಾಯಿಸಲು ಆಮ್ ಆದ್ಮಿ ಸರಕಾರ (ಆಪ್)ವು ವಿಫಲವಾಗಿದೆ ಎಂದು ದಿಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಆರೋಪಿಸಿದ್ದಾರೆ. ‘‘ಈ ಸರಕಾರವು ಕೇವಲ ಭರವಸೆಯ ಮಾತುಗಳನ್ನು ಆಡುತ್ತಿದೆ. ಕಳೆದ 10 ವರ್ಷಗಳಲ್ಲಿ ಅವರು ದಿಲ್ಲಿಗೆ ಯಾವುದಾದರೂ ಪರಿಸರ ಯೋಜನೆಗಳನ್ನು ತಂದಿದ್ದಾರಾ ಎಂದು ಅವರು ಪ್ರಶ್ನಿಸಿದರು. ಮುಖ್ಯವಾಗಿ ಧೂಳಿನಿಂದ ಸಮಸ್ಯೆಗಳು ತಲೆದೋರುತ್ತಿವೆ. ದಿಲ್ಲಿಯ ರಸ್ತೆಗಳು ಹಾಳಾಗಿವೆ. 3100 ಟನ್ ಸಿಎನ್‌ಜಿ ತ್ಯಾಜ್ಯವನ್ನು ಸಂಸ್ಕರಿಸದೆ ಬಿಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದನ್ನು ಸಂಸ್ಕರಿಸಲು ಅವರ ಬಳಿ ಸಲಕರಣೆಗಳಿಲ್ಲ’’ ಎಂದು ಎಎನ್‌ಐ ಜೊತೆ ಮಾತನಾಡಿದ ಅವರು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಆಪ್ ನಡುವಿನ ಜಟಾಪಟಿಯಿಂದಾಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್ ನಾಯಕಿ ಮಮ್ತಾಝ್ ಪಟೇಲ್ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News