ರೋಹಿಂಗ್ಯ ಮತ್ತು ಬಾಂಗ್ಲಾದೇಶೀಯರಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿ ಕಾಂಗ್ರೆಸ್ ಘೋಷಣೆ : ಪ್ರಧಾನಿ ಮೋದಿ ಆರೋಪ

Update: 2024-11-14 15:21 GMT

ಪ್ರಧಾನಿ ನರೇಂದ್ರ ಮೋದಿ | PC : PTI

ನವಿ ಮುಂಬೈ: ಕಾಂಗ್ರೆಸ್ ಪಕ್ಷವು ಜನರನ್ನು ಬಡತನಕ್ಕೆ ದೂಡಲು ಯತ್ನಿಸುತ್ತಿದೆ ಎಂದು ಗುರುವಾರ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷದ ನಾಯಕರು ರೋಹಿಂಗ್ಯ ಹಾಗೂ ಬಾಂಗ್ಲಾದೇಶೀಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸುವುದಾಗಿ ಬಹಿರಂಗವಾಗಿ ಘೋಷಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನವಿ ಮುಂಬೈ ಉಪನಗರದ ಖಾರ್ಘಾರ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, “ಬಡತನದಿಂದ ಹೊರ ಬಂದಿರುವ 25 ಕೋಟಿ ಜನರೇಕೆ ಉಚಿತ ಪಡಿತರ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಈ ಜನರ ವೆಚ್ಚ ಹೆಚ್ಚಾಗಿ, ಮತ್ತೆ ಅವರು ಬಡತನಕ್ಕೆ ಮರಳಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಜನರಿಗೆ ಅವಕಾಶ ದೊರೆತರೆ ಅವರು ಅದನ್ನೇ ಮಾಡಲಿದ್ದಾರೆ” ಎಂದು ಆರೋಪಿಸಿದರು.

“ಅವರು ಬಡವರಿಗೆ ಉಚಿತ ಪಡಿತರ ನೀಡುತ್ತಿರುವುದರ ಕುರಿತು ಪ್ರಶ್ನಿಸುತ್ತಿರುವಾಗಲೇ, ಕಾಂಗ್ರೆಸ್ ಪಕ್ಷದ ಸಚಿವರೊಬ್ಬರು ಹಿಂದೂಗಳು, ಮುಸ್ಲಿಮರು ಹಾಗೂ ನುಸುಳುಕೋರರಿಗೂ ಉಚಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಘೋಷಣೆ ಮಾಡಿದ್ದಾರೆ. ಅವರು ರೋಹಿಂಗ್ಯಗಳು ಹಾಗೂ ಬಾಂಗ್ಲಾದೇಶೀಯರಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ಭರವಸೆಯನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ” ಎಂದೂ ಅವರು ಟೀಕಾಪ್ರಹಾರ ನಡೆಸಿದರು.

“ಮತ ಪಡೆಯಲು ಅವರು ಹೇಗೆ ದೇಶ ಮತ್ತು ನಿಮ್ಮ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂಬುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ. ಹೀಗಾಗಿ, ಕಾಂಗ್ರೆಸ್ಸಿಗರು ಮತ ಬ್ಯಾಂಕ್ ರಾಜಕಾರಣದಲ್ಲಿ ನಿಪುಣರಾಗಿದ್ದು, ಅವರು ಬಡವರ ವಿರೋಧಿಗಳು ಎಂಬುದನ್ನೂ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಿದೆ. ಹೀಗಾಗಿ, ಕಾಂಗ್ರೆಸ್ ಅನ್ನು ತಡೆಯುವುದು ಬಡವರ ಜವಾಬ್ದಾರಿಯಾಗಿದೆ” ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News