ಪ್ರಧಾನಿ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರ
ಜಾರ್ಜ್‌ಟೌನ್ : ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆರಿಬಿಯನ್ ದ್ವೀಪರಾಷ್ಟ್ರವಾದ ಡೊಮಿನಿಕಾವು ತನ್ನ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರ ‘ಡೊಮಿನಿಕಾ ಅವಾರ್ಡ್ ಆಫ್ ಹಾನರ್’ ಅನ್ನು ಘೋಷಿಸಿದೆ. ಗಯಾನಾದ ಜಾರ್ಜ್‌ಟೌನ್‌ನಲ್ಲಿ ನವೆಂಬರ್ 19ರಿಂದ 21ರವರೆಗೆ ನಡೆಯಲಿರುವ ಇಂಡಿಯಾ-ಕ್ಯಾರಿಕೊಮ್ ಸಮಾವೇಶದಲ್ಲಿ ಡೊಮಿನಿಕನ್ ಅಧ್ಯಕ್ಷ ಸಿಲ್ವಾನಿ ಬರ್ಟನ್ ಅವರು ಈ ಪುರಸ್ಕಾರವನ್ನು ಮೋದಿಯವರಿಗೆ ಪ್ರದಾನ ಮಾಡಲಿದ್ದಾರೆ.
ಕೋವಿಡ್19 ಸಾಂಕ್ರಾಮಿಕದ ಹಾವಳಿಯನ್ನು ನಿಯಂತ್ರಿಸಲು ಡೊಮಿನಿಕಾಗೆ ಪ್ರಧಾನಿ ಮೋದಿ ನೀಡಿದ ಕೊಡುಗೆ ಹಾಗೂ ಭಾರತ ಮತ್ತು ಡೊಮಿನಿಕಾ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಸಮರ್ಪಣಾ ಮನೋಭಾವನನ್ನು ಪರಿಗಣಿಸಿ ಈ ಪುರಸ್ಕಾರವನ್ನು ಘೋಷಿಸಲಾಗಿದೆ ಎಂದು ಡೊಮಿನಿಕಾ ಪ್ರಧಾನಿಯವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕೋವಿಡ್ 19 ಸಾಂಕ್ರಾಮಿಕದ ಹಾವಳಿಯ ಸಂದರ್ಭ ಭಾರತವು ಡೊಮಿನಿಕಾಗೆ ಅಸ್ಟ್ರಾಝೆನೆಕಾ ಲಸಿಕೆಯ 70 ಡೋಸ್‌ಗಳನ್ನು ಪೂರೈಕೆ ಮಾಡಿತ್ತು.
ಈ ಮಧ್ಯೆ ಭಾರತದ ಪ್ರಧಾನಿ ಕಾರ್ಯಾಲಯವು ಹೇಳಿಕೆಯೊಂದನ್ನು ನೀಡಿ, ಈ ಪುರಸ್ಕಾರವು ಆರೋಗ್ಯಪಾಲನೆ,ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಡೊಮಿನಿಕಾ ದೇಶಕ್ಕೆ ಮೋದಿ ನಾಯಕತ್ವದಲ್ಲಿ ಭಾರತ ನೀಡಿದ್ದ ಬೆಂಬಲದ ದ್ಯೋತಕವಾಗಿದೆ ಎಂದು ಹೇಳಿದೆ.
ಹವಾಮಾನ ಬದಲಾವಣೆ ಹಾಗೂಭೂರಾಜಕೀಯ ಸಂಘರ್ಷಗಳಂತಹ ಜಾಗತಿಕ ಸವಾಲುಗಳನ್ನು ನಿಭಾಯಿಸುವ ಮಹತ್ವವನ್ನು ಪ್ರಧಾನಿ ಮೋದಿಯವರು ಪ್ರತಿಪಾದಿಸುತ್ತಾ ಬಂದಿದ್ದಾರೆಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.