ಉತ್ತರ ಪ್ರದೇಶ | ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ
ಲಕ್ನೋ : ಉತ್ತರಪ್ರದೇಶದ ಮುಝಾಫರ್‌ನಗರ ಜಿಲ್ಲೆಯ ಭೆನ್ಸಿ ಗ್ರಾಮದಲ್ಲಿ ದಲಿತ ವ್ಯಕ್ತಿಯ ಅಂತ್ಯ ಕ್ರಿಯೆಗೆ ಅಡ್ಡಿಪಡಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಗ್ರಾಮದ ಮುಖ್ಯಸ್ಥ ಹಾಗೂ ಇತರ ಮೂವರ ವಿರುದ್ಧ ಖಾಟೋಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಬಾಬುರಾಮ್ ಅವರು ನವೆಂಬರ್ 9ರಂದು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಗ್ರಾಮದಲ್ಲಿರುವ ಚಿತಾಗಾರಕ್ಕೆ ಕೊಂಡೊಯ್ಯಲಾಗಿತ್ತು. ಈ ಸಂದರ್ಭ ಗ್ರಾಮ ಮುಖ್ಯಸ್ಥ ಅಮಿತ್ ಅಹ್ಲವಾತ್ ಅವರ ನೇತೃತ್ವದ ಗುಂಪು ಅಂತ್ಯ ಕ್ರಿಯೆಗೆ ಅಡ್ಡಿಪಡಿಸಿತು ಹಾಗೂ ಜಾತಿ ನಿಂದನೆ ಮಾಡಿತು ಎಂದು ಸೋನಿಯಾ ಎಂಬ ಮಹಿಳೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ರಾಮಾಶಿಶ್ ಯಾದವ್ ತಿಳಿಸಿದ್ದಾರೆ.
ಅನಂತರ ಪೊಲೀಸರು ಮಧ್ಯಪ್ರವೇಶಿಸಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟರು. ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.