ಮಣಿಪುರದಲ್ಲಿನ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಆಗ್ರಹ

Update: 2024-04-20 08:35 GMT

PC : PTI 

ಇಂಫಾಲ: ಮಣಿಪುರದಲ್ಲಿನ 47 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆಗ್ರಹಿಸಿರುವ ಕಾಂಗ್ರೆಸ್, ಈಶಾನ್ಯ ರಾಜ್ಯವಾದ ಮಣಿಪುರದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿದೆ.

ಸಂಘರ್ಷಪೀಡಿತ ಮಣಿಪುರದ ಎರಡು ಲೋಕಸಭಾ ಕ್ಷೇತ್ರಗಳಲ್ಲಿನ ಕೆಲವು ಮತಗಟ್ಟೆಗಳಲ್ಲಿ ಗುಂಡಿನ ದಾಳಿ, ಬೆದರಿಕೆ, ಇವಿಎಂಗಳ ಧ್ವಂಸ ಹಾಗೂ ಮತಗಟ್ಟೆ ವಶದಂಥ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಇನ್ನರ್ ಮಣಿಪುರ ಹಾಗೂ ಔಟರ್ ಮಣಿಪುರ ಲೋಕಸಭಾ ಕ್ಷೇತ್ರಗಳಲ್ಲಿ ಶೇ. 68ಕ್ಕೂ ಹೆಚ್ಚು ಮತದಾನದ ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ, ಒಳ ಮಣಿಪುರ ಲೋಕಸಭಾ ಕ್ಷೇತ್ರದ 31 ಮತಗಟ್ಟೆಗಳು ಹಾಗೂ ಹೊರ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಮಣಿಪುರ ಮುಖ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ಪಕ್ಷವು ದೂರು ಸಲ್ಲಿಸಿದೆ ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಮೇಘಚಂದ್ರ, “ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕೆಲವು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಅಂಗೋಮ್ಚಾ ಬಿಮೊಲ್ ಅಕೋಯಿಜಾಮ್ ಹಾಗೂ ಪಕ್ಷದ ಚುನಾವಣಾ ಏಜೆಂಟ್ ಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಈ ಕುರಿತು ಮಣಿಪುರ ಮುಖ್ಯ ಚುನಾವಣಾಧಿಕಾರಿಗೆ ನಾವು ದೂರು ಸಲ್ಲಿಸಿದ್ದು, ಒಳ ಮಣಿಪುರ ಕ್ಷೇತ್ರದ 36 ಮತಗಟ್ಟೆಗಳು ಹಾಗೂ ಹೊರ ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಆಗ್ರಹಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಮರು ಮತದಾನಕ್ಕೆ ಆಗ್ರಹಿಸಲಾಗಿರುವ ಮತಗಟ್ಟೆಗಳ ಪೈಕಿ ಮುಖ್ಯಮಂತ್ರಿ ಎನ್‍.ಬಿರೇನ್ ಸಿಂಗ್ ಪ್ರತಿನಿಧಿಸುತ್ತಿರುವ ಹೈನ್ ಗ್ಯಾಂಗ್ ವಿಧಾನಸಭಾ ಕ್ಷೇತ್ರದಲ್ಲಿನ ಮೂರು ಮತಗಟ್ಟೆಗಳೂ ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News