ಪಕ್ಷದ ಅಪೀಲಿನ ನಂತರ ಬ್ಯಾಂಕ್ ಖಾತೆಗಳು ಈಗ ಯಥಾಸ್ಥಿತಿಗೆ: ಕಾಂಗ್ರೆಸ್ ಹೇಳಿಕೆ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಅಪೀಲಿನ ನಂತರ ಆದಾಯ ತೆರಿಗೆ ಅಪೀಲು ಟ್ರಿಬ್ಯುನಲ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಯಥಾಸ್ಥಿತಿಗೆ ಮರುಸ್ಥಾಪಿಸಿದೆ ಎಂದು ಕಾಂಗ್ರೆಸ್ ನಾಯಕ ವಿವೇಕ್ ಟಂಖ ಹೇಳಿದ್ದಾರೆ.
ಪಕ್ಷದ ಹಾಗೂ ಪಕ್ಷದ ಯುವ ಘಟಕದ ಮುಖ್ಯ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ, ಇದರಿಂದ ಪಕ್ಷದ ಎಲ್ಲಾ ಚಟುವಟಿಕೆ ಬಾಧಿತವಾಗಿದೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಇಂದು ಬೆಳಿಗ್ಗೆ ದೂರಿದ್ದರು.
ಕಾಂಗ್ರೆಸ್ ಪರವಾಗಿ ಟ್ರಿಬ್ಯುನಲ್ ಮುಂದೆ ವಿವೇಕ್ ಟಂಖ ಹಾಜರಾಗಿದ್ದರು. ಈಗ ಪಕ್ಷಕ್ಕೆ ತನ್ನ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುಮತಿಸಲಾಗಿದೆ. ಮುಂದಿನ ವಿಚಾರಣೆ ಮುಂದಿನ ಬುಧವಾರ ನಡೆಯಲಿದ್ದು ಆಗ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವೇಕ್ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದರೆ ಪಕ್ಷಕ್ಕೆ “ಚುನಾವಣಾ ಹಬ್ಬದಲ್ಲಿ” ಭಾಗವಹಿಸಲು ಸಾಧ್ಯವಾಗದು ಎಂದು ತಾನು ಟ್ರಿಬ್ಯುನಲ್‌ಗೆ ತಿಳಿಸಿದ್ದಾಗಿ ವಿವೇಕ್ ಹೇಳಿದ್ದಾರೆ.