ಕಾಂಗ್ರೆಸ್ ನ ʼಮಾವೋವಾದಿ ಪ್ರಣಾಳಿಕೆʼ ದೇಶವನ್ನು ದಿವಾಳಿಯಂಚಿಗೆ ಒಯ್ಯಲಿದೆ : ಪ್ರಧಾನಿ ಮೋದಿ
ಮುಂಬೈ: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮಾವೋವಾದಿ ಪ್ರಣಾಳಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಇದು ದೇಶದ ಆರ್ಥಿಕ ಪ್ರಗತಿಗೆ ತಡೆಯಾಗುವುದು ಮಾತ್ರವಲ್ಲದೇ, ಇದನ್ನು ಜಾರಿಗೊಳಿಸಿದರೆ ದೇಶ ದಿವಾಳಿಯಾಗಲಿದೆ ಎಂದು ಎಚ್ಚರಿಸಿದರು.
ಮಹಾತ್ಮಾಗಾಂಧೀಜಿಯವರ ಆಶಯದಂತೆ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿದ್ದರೆ, ಭಾರತ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಈಗ ಇರುವುದಕ್ಕಿಂತ ಐದು ದಶಕಗಳಷ್ಟು ಮುಂದಿರುತ್ತಿತ್ತು ಎಂದರು.
ಐದನೇ ಹಂತದ ಮತದಾನ ನಡೆಯುವ ಮೂರು ದಿನ ಮೊದಲು ಮುಂಬೈನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರಣಾಳಿಕೆಯನ್ನೇ ಗುರಿಮಾಡಿ ಟೀಕಾಪ್ರಹಾರ ನಡೆಸಿದರು. ಮಹಾರಾಷ್ಟ್ರದಲ್ಲಿ ಕೊನೆಯ ಹಂತದಲ್ಲಿ 13 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
"ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಇದಕ್ಕಾಗಿ ಏನು ಬೇಕಾದರೂ ಮಾಡಲಿದೆ. ಇದರ ಮಾವೋವಾದಿ ಪ್ರಣಾಳಿಕೆ, ದೇವಾಲಯಗಳ ಚಿನ್ನ ಹಾಗೂ ಮಹಿಳೆಯರ ಮಂಗಲಸೂತ್ರಕ್ಕೂ ಕಣ್ಣುಹಾಕಿದೆ. ಈ ಮಾವೋವಾದಿ ಪ್ರಣಾಳಿಕೆ ಆರ್ಥಿಕ ಪ್ರಗತಿಗೆ ಧಕ್ಕೆ ಉಂಟು ಮಾಡುವುದು ಮಾತ್ರವಲ್ಲದೇ ದೇಶವನ್ನು ದಿವಾಳಿಯಂಚಿಗೆ ಒಯ್ಯಲಿದೆ" ಎಂದು ಶಿವಾಜಿ ಪಾರ್ಕ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಹೇಳಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ನ ಪಡಿಯಚ್ಚು ಎಂದು ಮೋದಿ ಟೀಕಿಸಿದ್ದರು.
1980ರ ದಶಕದಲ್ಲಿ ರದ್ದು ಮಾಡಿದ್ದ ಪಿತ್ರಾರ್ಜಿತ ಆಸ್ತಿ ಮೇಲಿನ ತೆರಿಗೆಯನ್ನು ಮತ್ತೆ ವಿಧಿಸಲು ಕಾಂಗ್ರೆಸ್ ಬಯಸಿದೆ. ಶೇಕಡ 50ರಷ್ಟು ಪಿತ್ರಾರ್ಜಿತ ಆಸ್ತಿ ತೆರಿಗೆ ವಿಧಿಸಲು ಯೋಚಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.