ಅನುರಾಗ್ ಠಾಕೂರ್ ಭಾಷಣಕ್ಕೆ ಬೆಂಬಲ ವ್ಯಕ್ತಪಡಿಸಿದ ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ದೂರು ನೀಡಿದ ಕಾಂಗ್ರೆಸ್

Update: 2024-07-31 09:22 GMT

ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಅನುರಾಗ್ ಠಾಕೂರ್ ಅವರ ಭಾಷಣವನ್ನು ಬೆಂಬಲಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಯುಚ್ಯುತಿ ದೂರು ನೀಡಿದೆ. ಇದರಿಂದ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಿನ್ನೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಆಸನದಲ್ಲಿದ್ದ ಹಿರಿಯ ಕಾಂಗ್ರೆಸ್ ಸಂಸದೆ ಜಗದಾಂಬಿಕಾ ಪಾಲ್, ಅನುರಾಗ್ ಠಾಕೂರ್ ಅವರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲಾಗುವುದು ಎಂದು ಭರವಸೆ ನೀಡಿದ್ದರು.

ಕಡತದಿಂದ ತೆಗೆದು ಹಾಕಿರುವ ಭಾಷಣವನ್ನು ಆನ್‍ ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮನವಿ ಮಾಡಿದ್ದರಾದರೂ, ಸಂಸದ್ ಟಿವಿಯು ಈ ಪ್ರಕರಣದಲ್ಲಿ ಸಂಕಲಿಸದ ಭಾಷಣವನ್ನೇ ಅಪ್ಲೋಡ್ ಮಾಡಿದೆ. “ಇದು ಭಾರತೀಯ ಸಂಸದೀಯ ಇತಿಹಾಸದಲ್ಲಿ ನಾಚಿಕೆಗೇಡಿನ ಕೆಳಮಟ್ಟವಾಗಿದೆ. ಇದು ಬಿಜೆಪಿ-ಆರೆಸ್ಸೆಸ್ ಹಾಗೂ ಮೋದಿಯವರಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತೀಯತೆಯನ್ನು ಪ್ರತಿಫಲಿಸುತ್ತದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಅನುರಾಗ್ ಠಾಕೂರ್ ಭಾಷಣದ ಇದೇ ವಿಡಿಯೊ ತುಣಕನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಈ ಭಾಷಣವನ್ನು ಕೇಳಲೇಬೇಕು ಎಂದು ಸಲಹೆ ನೀಡಿದ್ದಾರೆ. “ನನ್ನ ಯುವ ಮತ್ತು ಉತ್ಸಾಹಿ ಸಹೋದ್ಯೋಗಿ ಅನುರಾಗ್ ಠಾಕೂರ್ ಮಾಡಿರುವ ಭಾಷಣವನ್ನು ಕೇಳಲೇಬೇಕು. ಇದು ವಾಸ್ತವಾಂಶಗಳು ಹಾಗೂ ವಿಡಂಬನೆಯ ನಿಖರ ಮಿಶ್ರಣವಾಗಿದ್ದು, ಇಂಡಿ ಮೈತ್ರಿಕೂಟದ ಕೊಳಕು ರಾಜಕಾರಣವನ್ನು ಅನಾವರಣಗೊಳಿಸಿದೆ” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿಯ ಈ ನಡೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, “ತೀವ್ರ ಅವಹೇಳನಕಾರಿ ಹಾಗೂ ಅಸಾಂವಿಧಾನಿಕ ಮನಸ್ಥಿತಿಯ ಭಾಷಣವನ್ನು ಹಂಚಿಕೊಳ್ಳುವ ಮೂಲಕ, ಪ್ರಧಾನಿಯು ಗಂಭೀರ ಸಂಸದೀಯ ಹಕ್ಕುಚ್ಯುತಿಯನ್ನು ಪ್ರೋತ್ಸಾಹಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News