ಕೋರ್ಟ್ ವೆಬ್‍ಸೈಟ್‍ನಲ್ಲಿ ತದ್ವಿರುದ್ಧ ಆದೇಶ ಪ್ರಕಟ: ತನಿಖೆಗೆ ಹೈಕೋರ್ಟ್ ಸೂಚನೆ

Update: 2024-10-11 05:14 GMT

ಸಾಂದರ್ಭಿಕ ಚಿತ್ರ (PTI)

ಪ್ರಯಾಗ್‍ರ ರಾಜ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್‍ನಲ್ಲಿ ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎರಡು ತದ್ವಿರುದ್ಧ ತೀರ್ಪುಗಳು ಪ್ರಕಟವಾಗಿರುವ ಬಗ್ಗೆ ತನಿಖೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.

ಕೋರ್ಟ್‍ನ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿರುವ ಒಂದು ಆದೇಶದಲ್ಲಿ ನ್ಯಾಯಾಧೀಶರ ಸಹಿ ಇದ್ದರೆ ಮತ್ತೊಂದರಲ್ಲಿ ಸಹಿ ಇಲ್ಲ. "ಮ್ಯಾಜಿಸ್ಟ್ರೇಟ್ ಅವರ ನಡತೆಗೆ ಸಂಬಂಧಿಸಿದಂತೆ ಅವರು ಹೆಚ್ಚು ಜಾಗರೂಕರಾಗಿರಲಿಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ. ಒಂದು ಸಹಿ ಮಾಡದ ತದ್ವಿರುದ್ಧ ಆದೇಶವನ್ನು ಅಪ್‍ಲೋಡ್ ಮಾಡಲಾಗಿದೆ. ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಇದುವರೆಗೆ ಯಾವ ತನಿಖೆಯನ್ನೂ ಆರಂಭಿಸಿಲ್ಲ. ಇವರು ಯುವ ಮ್ಯಾಜಿಸ್ಟ್ರೇಟ್ ಎಂದು ಹೈಕೋರ್ಟ್‍ಗೆ ಮಾಹಿತಿ ಇದೆ. ಅವರ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವ್ಯತಿರಿಕ್ತ ಆದೇಶವನ್ನು ನಾನು ನೀಡುತ್ತಿಲ್ಲ" ಎಂದು ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶ್ಯಾಮ್‍ಶೆರಿ ಅವರು ಪರೂಲ್ ಅಗರ್‍ವಾಲ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರದಲ್ಲಿ ತೀರ್ಪು ನೀಡಿದ್ದಾರೆ.

ಸಹಿ ಮಾಡದ ಆದೇಶದ ಪ್ರತಿಯಲ್ಲಿ ಮಾನಹಾನಿ ದೂರನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಸಹಿ ಮಾಡಿದ ಆದೇಶದಲ್ಲಿ ಪ್ರತಿವಾದಿಗಳಿಗೆ ಭಾರತೀಯ ದಂಡಸಂಹಿತೆ ಸೆಕ್ಷನ್ 500 (ಮಾನಹಾನಿ) ಅನ್ವಯ ಸಮನ್ಸ್ ನೀಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News