‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವ ವಿರೋಧಿಸಿ ಕೇರಳ ವಿಧಾನ ಸಭೆ ನಿರ್ಣಯ ಅಂಗೀಕಾರ

Update: 2024-10-10 15:40 GMT

PC : X

ತಿರುವನಂತಪುರ : ರಾಮನಾಥ್ ಕೋವಿಂದ್ ಸಮಿತಿ ಶಿಫಾರಸು ಮಾಡಿದ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವ ಅನುಮೋದಿಸುವ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಕೇರಳ ವಿಧಾನ ಸಭೆ ಗುರುವಾರ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ನಿರ್ಣಯ ಮಂಡಿಸಿದರು. ಈ ಪ್ರಸ್ತಾವ ಪ್ರಜಾತ್ತಾತ್ಮಕವಲ್ಲ ಹಾಗೂ ಸಂವಿಧಾನ ವಿರೋಧಿ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ವೈವಿದ್ಯಮಯ ಸ್ವರೂಪಕ್ಕೆ ಧಕ್ಕೆ ತರುತ್ತದೆ ಎಂದು ಅವರು ಪ್ರತಿಪಾದಿಸಿದರು.

ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ದೇಶದ ವಿವಿಧ ವಿಧಾನ ಸಭೆಗಳು, ಸ್ಥಳೀಯ ಸಂಸ್ಥೆಗಳು ಅವಧಿಗೆ ಮುಂಚಿತವಾಗಿ ಮುಕ್ತಾಯಗೊಳ್ಳುತ್ತವೆ ಎಂದು ಅವರು ಗಮನ ಸೆಳೆದರು.

‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಮೊದಲ ಹಂತವಾಗಿ ಉನ್ನತ ಮಟ್ಟದ ಸಮಿತಿ ಲೋಕಸಭೆ ಹಾಗೂ ವಿಧಾನ ಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿದೆ. ಅದಾದ ಬಳಿಕ 100 ದಿನಗಳ ಒಳಗೆ ಸ್ಥಳೀಯ ಸಂಸ್ಥೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.

ಈ ಪ್ರಸ್ತಾವ ಜಾರಿಗೆ ಬಂದರೆ ಅಧಿಕಾರ ಕೇಂದ್ರೀಕೃತವಾಗುತ್ತದೆ ಹಾಗೂ ಆರೆಸ್ಸೆಸ್ ಹಾಗೂ ಬಿಜೆಪಿಯ ಮಾರ್ಗಸೂಚಿಗೆ ಅನುಗಣವಾಗಿ ಏಕೀಕೃತ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಲೋಕಸಭೆ, ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೇವಲ ವೆಚ್ಚದಾಯಕವೆಂದು ಪರಿಗಣಿಸುತ್ತಿರುವುದಕ್ಕೆ ಸಮಿತಿಯನ್ನು ಅವರು ಟೀಕಿಸಿದ್ದಾರೆ. ಅಲ್ಲದೆ ಈ ರೀತಿಯ ಹಣೆಪಟ್ಟಿ ಹಚ್ಚುವ ನಿಲುವು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.

ಈ ಪ್ರಸ್ತಾವ ಅನಗತ್ಯ ಎಂದು ಹೇಳಿದ ರಾಜೇಶ್, ಚುನಾವಣೆಯ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಆಡಳಿತವನ್ನು ಸುಧಾರಿಸಲು ಸರಳವಾದ ದಾರಿಗಳಿವೆ. ಈ ಪ್ರಸ್ತಾವ ಸಂವಿಧಾನ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News