ಹರ್ಯಾಣ ವಿಧಾನ ಸಭೆಗೆ ಆಯ್ಕೆಯಾದ 90ರಲ್ಲಿ 86 ಶಾಸಕರು ಕೋಟ್ಯಧಿಪತಿಗಳು : ಎಡಿಆರ್ ವರದಿ
ಹೊಸದಿಲ್ಲಿ : ಹರ್ಯಾಣ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾದ 90 ಶಾಸಕರಲ್ಲಿ 86 ಶಾಸಕರು (ಶೇ. 96) ಕೋಟ್ಯಧಿಪತಿಗಳು. 12 ಶಾಸಕರು (ಶೇ. 13) ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಚುನಾವಣೆ ಸುಧಾರಣೆಗೆ ಕೆಲಸ ಮಾಡುತ್ತಿರುವ ಸಂಘಟನೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್)ನ ದತ್ತಾಂಶ ಬಹಿರಂಗಗೊಳಿಸಿದೆ.
ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಹಾಗೂ ಹರ್ಯಾಣ ಇಲೆಕ್ಷನ್ ವಾಚ್ ನಡೆಸಿದ ಎಲ್ಲಾ 90 ವಿಜೇತ ಅಭ್ಯರ್ಥಿಗಳ ಅಫಿಡಾವಿಟ್ ವಿಶ್ಲೇಷಣೆ ಕೋಟ್ಯಧಿಪತಿ ಶಾಸಕರ ಸಂಖ್ಯೆಯಲ್ಲಿ ನಿಧಾನವಾಗಿ ಹೆಚ್ಚಳವಾಗಿರುವುದನ್ನು ತೋರಿಸಿದೆ. ಕೋಟ್ಯಧಿಪತಿ ಶಾಸಕರ ಪ್ರಮಾಣ 2019ರಲ್ಲಿ ಶೇ. 93 ಇದ್ದುದು, ಈ ಬಾರಿ ಶೇ. 96ಕ್ಕೆ ಏರಿಕೆಯಾಗಿದೆ.
90 ಶಾಸಕರಲ್ಲಿ ಶೇ. 44 ಶಾಸಕರು 10 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ. ಕೇವಲ ಶೇ. 2.2 ಶಾಸಕರು ಮಾತ್ರ 20 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ದತ್ತಾಂಶ ತಿಳಿಸಿದೆ.
ವಿಜೇತ ಅಭ್ಯರ್ಥಿಗಳ ಸರಾಸರಿ ಆಸ್ತಿ 24.97 ಕೋಟಿ ರೂ. ಇದು 2019ರ 18.29 ಕೋಟಿ ರೂ.ಗೆ ಹೋಲಿಸಿದರೆ ಏರಿಕೆಯಾಗಿದೆ. ಪಕ್ಷವಾರು ಶೇ. 96 ಬಿಜೆಪಿ ಶಾಸಕರು, ಶೇ. 95 ಕಾಂಗ್ರೆಸ್ ಶಾಸಕರು, ಶೇ. 100 ಐಎನ್‌ಎಲ್‌ಡಿ ಹಾಗೂ ಪಕ್ಷೇತರ ಶಾಸಕರು ಘೋಷಿಸಿದ ಆಸ್ತಿ 1 ಕೋಟಿ ರೂ.ಗಿಂತ ಹೆಚ್ಚಿದೆ.
ಒಟ್ಟು 270 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಹಿಸಾರ್ ಕ್ಷೇತ್ರದ ಪಕ್ಷೇತರ ಶಾಸಕಿ ಸಾವಿತ್ರಿ ಜಿಂದಾಲ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಂತರ ಬಿಜೆಪಿಯ 145 ಕೋಟಿ ರೂ. ಆಸ್ತಿ ಹೊಂದಿರುವ ಶಕ್ತಿ ರಾಣಿ ಹಾಗೂ 134 ಕೋಟಿ ರೂ. ಆಸ್ತಿ ಹೊಂದಿರುವ ಶ್ರುತಿ ಚೌಧರಿ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಈ ನಡುವೆ ಜಯ ಗಳಿಸಿದ ಅಭ್ಯರ್ಥಿಗಳಲ್ಲಿ 12 ಶಾಸಕರು ತಮ್ಮ ಕ್ರಿಮಿನಲ್ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ಹತ್ಯೆ ಯತ್ನದ ಆರೋಪ ಎದುರಿಸುತ್ತಿರುವ ಓರ್ವ ಶಾಸಕ ಸೇರಿದಂತೆ 6 ಶಾಸಕರು ಗಂಭೀರ ಆರೋಪ ಎದುರಿಸುತ್ತಿದ್ದಾರೆ ಎಂದು ದತ್ತಾಂಶ ತಿಳಿಸಿದೆ.
ಪಕ್ಷವಾರು ಶೇ. 19 ಕಾಂಗ್ರೆಸ್ ಶಾಸಕರು, ಶೇ. 6 ಬಿಜೆಪಿ ಶಾಸಕರು ಹಾಗೂ ಶೇ. 67 ಪಕ್ಷೇತರ ಶಾಸಕರು ತಮ್ಮ ವಿರುದ್ಧದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿದ್ದಾರೆ.
ಈ ವಿಶ್ಲೇಷಣೆ 28 ಶಾಸಕರು 1 ಕೋಟಿ ರೂ. ಅಥವಾ ಅದಕ್ಕಿಂತ ಅಧಿಕ ಸಾಲಭಾದ್ಯತೆಗಳನ್ನು ಘೋಷಿಸಿರುವುದನ್ನು ಕೂಡ ಬಹಿರಂಗಪಡಿಸಿದೆ. ಲೊಹಾರು ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜ್‌ಬೀರ್ ಫರ್ತಿಯ ಆವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಅವರಿಗೆ 44 ಕೋಟಿ ರೂ. ಸಾಲ ಬಾಧ್ಯತೆ ಇದೆ.