ಅಮಿತ್ ಶಾ ವಿರುದ್ಧದ ಹಕ್ಕುಚ್ಯುತಿ ನೋಟಿಸ್ ತಿರಸ್ಕರಿಸಿದ ಸ್ಪೀಕರ್ ಜಗದೀಪ್ ಧನಕರ್

ರಾಜ್ಯಸಭಾ ಸ್ಪೀಕರ್ ಜಗದೀಪ್ ಧನಕರ್ (PTI)
ಹೊಸದಿಲ್ಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ ಹಕ್ಕು ಚ್ಯುತಿ ನೋಟಿಸ್ ಅನ್ನು ರಾಜ್ಯಸಭಾ ಸ್ಪೀಕರ್ ಜಗದೀಪ್ ಧನಕರ್ ಗುರುವಾರ ತಿರಸ್ಕರಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದರು. ಪ್ರಧಾನಮಂತ್ರಿ ಪರಿಹಾರ ನಿಧಿಯ ನಿರ್ವಹಣೆ ವಿಚಾರವಾಗಿ ಸೋನಿಯಾ ಗಾಂಧಿ ಅವರ ವಿರುದ್ಧ ಅಮಿತ್ ಶಾ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಯು ಒಂದು ಕುಟುಂಬದ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ ಅಧ್ಯಕ್ಷರು ಸರಕಾರಿ ನಿಧಿಯ ಸದಸ್ಯರಾಗಿದ್ದರು ಎಂದು ಅಮಿತ್ ಶಾ ಹೇಳಿರುವುದಾಗಿ ಜೈರಾಮ್ ರಮೇಶ್ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು.
ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡುವ ಸಂದರ್ಭದಲ್ಲಿ 1998ರ ಜನವರಿ 24ರಂದು ಭಾರತ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಹೊರಡಿಸಿದ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿದರು. ಅದರಲ್ಲಿ 1948ರಲ್ಲಿ ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ ನಿರ್ವಹಣೆ(PMNRF) ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಇದನ್ನು ಪ್ರಧಾನ ಮಂತ್ರಿಗಳು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ಇತರ ಕೆಲವರನ್ನು ಒಳಗೊಂಡ ಸಮಿತಿಯು ನಿರ್ವಹಿಸುತ್ತಿದೆ ಎಂದು ಹೇಳಿದರು.
ನಾನು ಅವರ ಹೇಳಿಕೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇನೆ, ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಕಂಡುಕೊಂಡಿದ್ದೇನೆ ಎಂದು ರಾಜ್ಯಸಭಾ ಸ್ಪೀಕರ್ ಜಗದೀಪ್ ಧನಕರ್ ಹಕ್ಕು ಚ್ಯುತಿ ನೋಟಿಸ್‌ನ್ನು ತಿರಸ್ಕರಿಸಿದರು.