ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯ ವೇಳೆ ಧೂಮಪಾನ ಮಾಡಿದ ಕಕ್ಷಿದಾರ : ವಿವರಣೆ ಕೇಳಿದ ದಿಲ್ಲಿ ನ್ಯಾಯಾಲಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ನ್ಯಾಯಾಲಯದ ವಿಚಾರಣೆಯ ವೇಳೆ ಕಕ್ಷಿದಾರನೋರ್ವ ಧೂಮಪಾನ ಮಾಡಿದ್ದಾನೆ. ದಿಲ್ಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯ ವೇಳೆ ಘಟನೆ ನಡೆದಿದ್ದು, ವೀಡಿಯೊ ಕಾನ್ಫರೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆಯನ್ನು ಕೋರ್ಟ್ ಗಮನಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತೀಸ್ ಹಜಾರಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವಕುಮಾರ್, ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಅರ್ಜಿದಾರ ಸುಶೀಲ್ ಕುಮಾರ್‌ಗೆ ನೋಟಿಸ್ ಜಾರಿ ಮಾಡಿದರು.
ಈ ಘಟನೆ ಸಂಭವಿಸಿದಾಗ ನ್ಯಾಯಾಲಯವು ಉಯಿಲಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಆರಂಭದಲ್ಲಿ ಕಕ್ಷಿದಾರ ಸುಶೀಲ್ ಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಣಿಸಿಕೊಂಡಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ. ನ್ಯಾಯಾಲಯದ ಕಲಾಪದಲ್ಲಿ ಗೊಂದಲ ಉಂಟಾಗುವುದರಿಂದ ಫೋನ್‌ನಲ್ಲಿ ಮಾತನಾಡಬೇಡಿ ಎಂದು ಅವರಿಗೆ ಸೂಚಿಸಲಾಗಿದೆ. ನ್ಯಾಯಾಲಯದ ನಿರ್ದೇಶನವನ್ನು ಅವರು ಕೇಳಲಿಲ್ಲ. ಅದರ ನಂತರ ಅವರ ಧ್ವನಿಯನ್ನು ಮ್ಯೂಟ್ ಮಾಡಲಾಗಿತ್ತು.
ಆ ಬಳಿಕ ಸುಶೀಲ್ ಕುಮಾರ್ ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಧೂಮಪಾನ ಮಾಡುತ್ತಿದ್ದ ಎಂದು ನ್ಯಾಯಾಲಯದ ಸಿಬ್ಬಂದಿ ಗಮನ ಸೆಳೆದರು. ನ್ಯಾಯಾಲಯವು ಸುಶೀಲ್ ಕುಮಾರ್‌ನ ದುರ್ನಡತೆಯ ಬಗ್ಗೆ ಕೇಳಿದಾಗ ಆತ ವೀಡಿಯೊ ಕರೆಯನ್ನು ಸ್ಥಗಿತಗೊಳಿಸಿದ್ದಾನೆ.
ಕಕ್ಷಿದಾರನ ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಮಾರ್ಚ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸುಶೀಲ್ ಕುಮಾರ್‌ಗೆ ಸೂಚಿಸಿದೆ. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಧೂಮಪಾನ ಮಾಡಿದ ಬಗ್ಗೆ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ವಿವರಿಸುವಂತೆ ಹೇಳಿದೆ.