ಆದಿತ್ಯನಾಥ್ ದ್ವೇಷದ ಬಗ್ಗೆ ನಮಗೆ ಉಪನ್ಯಾಸ ನೀಡುತ್ತಾರಾ? : ತ್ರಿಭಾಷಾ ವಿವಾದದ ಕುರಿತ ಉತ್ತರ ಪ್ರದೇಶ ಸಿಎಂ ಹೇಳಿಕೆಗೆ ಸ್ಟಾಲಿನ್ ವಿರೋಧ

ಆದಿತ್ಯನಾಥ್ / ಎಂ.ಕೆ. ಸ್ಟಾಲಿನ್ (Photo: PTI)
ಹೊಸದಿಲ್ಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ತ್ರಿಭಾಷಾ ವಿವಾದದ ಕುರಿತ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಫೈರ್‌ಬ್ರಾಂಡ್ ನಾಯಕನ ಹೇಳಿಕೆಗಳು ವ್ಯಂಗ್ಯವಲ್ಲ, ಆದರೆ ಗಾಢವಾದ ರಾಜಕೀಯ ಹಾಸ್ಯ, ತಮಿಳುನಾಡು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಆದರೆ, ಭಾಷೆಗಳ ಹೇರಿಕೆ ಮತ್ತು ಕೋಮುವಾದದ ವಿರುದ್ಧವಾಗಿದೆ ಎಂದು ಹೇಳಿದರು.
ANIಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು, ʼಅವರು ತಮ್ಮ ಮತ ಬ್ಯಾಂಕ್ ಅಪಾಯದಲ್ಲಿದೆ ಎಂದು ಭಾವಿಸುವ ಕಾರಣ ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆʼ ಎಂದು ಹೇಳಿದರು.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಹಿಂದಿ ಹೇರಿಕೆಗೆ ತಮಿಳುನಾಡಿನ ವಿರೋಧ ಮತ್ತು ನ್ಯಾಯಯುತವಾದ ಕ್ಷೇತ್ರಗಳ ಪುನರ್ ವಿಂಗಡನೆಯ ಬೇಡಿಕೆಯನ್ನು ಸ್ಟಾಲಿನ್ ಸಮರ್ಥಿಸಿಕೊಂಡರು. ದ್ವಿಭಾಷಾ ನೀತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡನೆ ಕುರಿತು ರಾಜ್ಯದ ನ್ಯಾಯಯುತ ಮತ್ತು ದೃಢವಾದ ಧ್ವನಿ ದೇಶಾದ್ಯಂತ ವೇಗವನ್ನು ಪಡೆಯುತ್ತಿದೆ. ಇದು ಬಿಜೆಪಿಗೆ ಅನಾನುಕೂಲವನ್ನುಂಟು ಮಾಡಿದೆ. ಈಗ ಗೌರವಾನ್ವಿತ ಆದಿತ್ಯನಾಥ್ ನಮಗೆ ದ್ವೇಷದ ಕುರಿತು ಉಪನ್ಯಾಸ ನೀಡಲು ಬಯಸುತ್ತಾರೆಯೇ? ನಮ್ಮನ್ನು ಬಿಡಿ. ಇದು ವಿಪರ್ಯಾಸವಲ್ಲ, ಇದು ರಾಜಕೀಯ ಪ್ರೇರಿತ ಗಾಢ ಹಾಸ್ಯ ಎಂದು ಬರೆದಿದ್ದಾರೆ.
ತಮ್ಮ ಪಕ್ಷವು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ ಆದರೆ ಭಾಷಾ ಹೇರಿಕೆ ಮತ್ತು ಕೋಮುವಾದವನ್ನು ವಿರೋಧಿಸುತ್ತದೆ. ಇದು ಮತಕ್ಕಾಗಿ ಗಲಭೆ ಮಾಡುವ ರಾಜಕೀಯವಲ್ಲ, ಇದು ಘನತೆ ಮತ್ತು ನ್ಯಾಯಕ್ಕಾಗಿರುವ ಹೋರಾಟವಾಗಿದೆ ಎಂದು ಸ್ಟಾಲಿನ್ ಹೇಳಿದರು.
ʼದೇಶವನ್ನು ಒಂದುಗೂಡಿಸುವ ಬದಲು, ಅವರು ಭಾಷೆ ಮತ್ತು ಪ್ರದೇಶದ ಆಧಾರದ ಮೇಲೆ ಬಿರುಕುಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ರಾಜಕೀಯವು ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆʼ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಸಂದರ್ಶನದಲ್ಲಿ ಹೇಳಿದರು. ಕ್ಷೇತ್ರಗಳ ಪುನರ್ ವಿಂಗಡನೆ ಬಗ್ಗೆ ಸ್ಟಾಲಿನ್ ಅವರ ಕಳವಳವನ್ನು ಅವರು ತಳ್ಳಿಹಾಕಿದರು. ಇದನ್ನು ರಾಜಕೀಯ ಅಜೆಂಡಾ ಎಂದು ಕರೆದರು.
ಹಿಂದಿಯನ್ನು ಪ್ರಬಲ ರಾಷ್ಟ್ರೀಯ ಭಾಷೆಯಾಗಿ ಪ್ರಚಾರ ಮಾಡುವ ಬಿಜೆಪಿಯ ಪ್ರಯತ್ನಗಳನ್ನು ಡಿಎಂಕೆ ವಿರೋಧಿಸುತ್ತಲೇ ಬಂದಿದೆ. ಇದು ಭಾರತದ ಭಾಷಾ ವೈವಿಧ್ಯತೆಗೆ ಧಕ್ಕೆ ತರುತ್ತದೆ ಎಂದು ವಾದಿಸಿದೆ. ಇದಲ್ಲದೆ ಕ್ಷೇತ್ರಗಳ ಪುನರ್ ವಿಂಗಡನೆ ಬಗ್ಗೆ ಸ್ಟಾಲಿನ್ ಕಳವಳ ವ್ಯಕ್ತಪಡಿಸಿದರು.