ಪನ್ನುನ್ ಹತ್ಯೆ ಸಂಚಿನಲ್ಲಿ ಸರ್ಕಾರಿ ಅಧಿಕಾರಿ ಶಾಮೀಲಾತಿ ಆರೋಪ ಕಳವಳಕಾರಿ, ನೀತಿಗೆ ವಿರುದ್ಧ: ವಿದೇಶಾಂಗ ಸಚಿವಾಲಯ
ಹೊಸದಿಲ್ಲಿ: ಅಮೆರಿಕಾದಲ್ಲಿ ನೆಲೆಸಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ನಡೆದಿದೆ ಹಾಗೂ ಇದರಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಶಾಮೀಲಾಗಿದ್ಧಾರೆಂಬ ಆರೋಪಗಳ ಕುರಿತು ಇಂದು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ಇದು ಕಳವಳಕಾರಿ ವಿಚಾರ” ಎಂದು ಹೇಳಿದರಲ್ಲದೆ ಈ ಆರೋಪಗಳ ಕುರಿತು ಸರ್ಕಾರ ಉನ್ನತ ಮಟ್ಟದ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.
ಖಾಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಪನ್ನುನ್ ಹತ್ಯೆಗೆ ಸಂಚು ರೂಪಿಸಲು ಭಾರತ ಸರ್ಕಾರದ ಉದ್ಯೋಗಿಯೊಬ್ಬರು ಭಾರತೀಯ ಪ್ರಜೆ ನಿಖಿಕ್ ಗುಪ್ತಾ ಮತ್ತಿತರರ ಜೊತೆ ಸಂಚು ಹೂಡಿದ್ದಾರೆಂಬ ಆರೋಪಗಳ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
“ಅಮೆರಿಕಾದ ನ್ಯಾಯಾಲಯದಲ್ಲಿ ಭಾರತೀಯ ಅಧಿಕಾರಿ ಜೊತೆ ನಂಟು ಹೊಂದಿದ್ದಾರೆನ್ನಲಾದ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣ ಕಳವಳಕಾರ. ಈ ರೀತಿಯ ಶಾಮೀಲಾತಿ ಸರ್ಕಾರಿ ನೀತಿಗೆ ವಿರುದ್ಧವಾಗಿದೆ,” ಎಂದು ಅವರು ಹೇಳಿದರು.
ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದ ಅವರು ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗದು ಎಂದಿದ್ದಾರೆ.
ಖಾಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನನ್ನು ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ ಮಾಡಿರುವುದರ ಹಿಂದೆ ಭಾರತ ಸರ್ಕಾರದ ಏಜಂಟರಿದ್ದಾರೆಂಬ ಕೆನಡಾದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು “ಕೆನಡಾದಲ್ಲಿ ಭಾರತ-ವಿರೋಧಿ ಉಗ್ರಗಾಮಿಗಳಿಗೆ ಮತ್ತು ಅವರ ಹಿಂಸೆಗೆ ಆಸ್ಪದ ನೀಡಲಾಗಿದೆ. ಕೆನಡಾದ ನಮ್ಮ ರಾಜತಾಂತ್ರಿಕ ಪ್ರತಿನಿಧಿಗಳೂ ಇದರಿಂದ ಬಾಧಿತರಾಗಿದ್ದಾರೆ ಎಂದು ಹೇಳಿದರು.