ಸಿಬಿಐ, ಈ.ಡಿ., ಪೋಲಿಸ್ ವೀಡಿಯೊ ಕರೆಗಳ ಮೂಲಕ ಜನರನ್ನು ಬಂಧಿಸುವುದಿಲ್ಲ: ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ

Update: 2024-10-06 11:12 GMT

ಹೊಸದಿಲ್ಲಿ: ದೇಶದಲ್ಲಿ ‘ಡಿಜಿಟಲ್ ಬಂಧನ’ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(I4C)ವು ಸಿಬಿಐ,ಈ.ಡಿ.,ಪೋಲಿಸ್,ಕಸ್ಟಮ್ಸ್ ಅಥವಾ ನ್ಯಾಯಾಧೀಶರು ವೀಡಿಯೊ ಕರೆಗಳ ಮೂಲಕ ಜನರನ್ನು ಬಂಧಿಸುವುದಿಲ್ಲ ಎಂದು ಸಾರ್ವಜನಿಕ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನು‘ವಂಚನೆ‘ ಎಂದು ಬಣ್ಣಿಸಿರುವ I4C,ಅಂತರ್ಜಾಲವನ್ನು ಬಳಸಿ ನಡೆಸಲಾಗುವ ಇಂತಹ ಅಪರಾಧಗಳಿಗೆ ಬಲಿಯಾಗದಂತೆ ಜನರಿಗೆ ಎಚ್ಚರಿಕೆ ನೀಡಿದೆ.

‘ಭಯ ಪಡಬೇಡಿ,ಎಚ್ಚರಿಕೆಯಿಂದಿರಿ. ಸಿಬಿಐ,ಪೋಲಿಸ್,ಕಸ್ಟಮ್ಸ್,ಈ.ಡಿ., ನ್ಯಾಯಾಧೀಶರು ವೀಡಿಯೊ ಕರೆ ಮೂಲಕ ನಿಮ್ಮನ್ನು ಬಂಧಿಸುವುದಿಲ್ಲ ’ ಎಂದು ಶನಿವಾರ ಹೊರಡಿಸಲಾದ ಹೇಳಿಕೆಯು ತಿಳಿಸಿದೆ.

ವಾಟ್ಸ್ ಆ್ಯಪ್ ಮತ್ತು ಸ್ಕೈಪ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿ ಇಂತಹ ವಂಚನೆ ಕರೆಗಳನ್ನು ಮಾಡಲಾಗುತ್ತದೆ ಎಂದು ತೋರಿಸಲು ಅವುಗಳ ಲೋಗೊಗಳನ್ನೂ ಹೇಳಿಕೆಯಲ್ಲಿ ಪ್ರದರ್ಶಿಸಲಾಗಿದೆ.

ಇಂತಹ ಅಪರಾಧಗಳ ವಿರುದ್ಧ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ತಾವು ಸರಕಾರದ ಸೈಬರ್ ಭದ್ರತಾ ಏಜೆನ್ಸಿಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಈ ಸಾಮಾಜಿಕ ಮಾಧ್ಯಮ ವೇದಿಕೆಗಳು ಹಿಂದೆ ಹೇಳಿದ್ದವು.

ಇಂತಹ ಅಪರಾಧಗಳನ್ನು ಕೇಂದ್ರಸಹಾಯವಾಣಿ ಸಂಖ್ಯೆ 1930 ಅಥವಾ www.cybercrime.gov.in ವೆಬ್‌ಸೈಟ್‌ಗೆ ವರದಿ ಮಾಡುವಂತೆ I4C ಜನರನ್ನು ಆಗ್ರಹಿಸಿದೆ.

ಡಿಜಿಟಲ್ ಬಂಧನವು ಸೈಬರ್ ಅಪರಾಧ ತಂತ್ರಕ್ಕೆ ನೀಡಲಾಗಿರುವ ಹೆಸರಾಗಿದ್ದು,ಇಲ್ಲಿ ವಂಚಕರು ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿ ಅಥವಾ ಆತನ/ಆಕೆಯ ಕುಟುಂಬದ ಸದಸ್ಯರನ್ನು ಮಾದಕ ದ್ರವ್ಯ ಸಾಗಾಣಿಕೆ ಅಥವಾ ಅಕ್ರಮ ಹಣ ವರ್ಗಾವಣೆಯಂತಹ ಕ್ರಿಮಿನಲ್ ಚಟುವಟಿಕೆಯಲ್ಲಿ ಸರಕಾರದ ತನಿಖಾ ಸಂಸ್ಥೆಯು ಬಂಧಿಸಿದೆ ಎಂಬ ಸುಳ್ಳು ಎಸ್‌ಎಂಎಸ್‌ಗಳನ್ನು ಕಳುಹಿಸುತ್ತಾರೆ ಅಥವಾ ವೀಡಿಯೊ ಕರೆಗಳನ್ನು ಮಾಡುತ್ತಾರೆ.

ಬಳಿಕ ಸೈಬರ್ ಕ್ರಿಮಿನಲ್‌ಗಳು ‘ಡಿಜಿಟಲ್ ಬಂಧನ’ದ ಭಾಗವಾಗಿ ತಮ್ಮ ಮೊಬೈಲ್ ಫೋನ್ ಕ್ಯಾಮರಾಗಳನ್ನು ಆನ್ ಆಗಿರಿಸುವಂತೆ ಸೂಚಿಸುವ ಮೂಲಕ ವ್ಯಕ್ತಿಗಳನ್ನು ಅವರ ಆವರಣದಲ್ಲಿ ದಿಗ್ಬಂಧನದಲ್ಲಿರಿಸುತ್ತಾರೆ ಮತ್ತು ಈ ಸ್ಥಿತಿಯಿಂದ ಬಲಿಪಶುವನ್ನು ಪಾರು ಮಾಡಲು ಹಣವನ್ನು ಆನ್‌ಲೈನ್ ವರ್ಗಾವಣೆ ಮಾಡುವಂತೆ ಸೂಚಿಸುತ್ತಾರೆ.

ದೇಶದ ವಿವಿಧ ಭಾಗಗಳಿಂದ ಈ ಹೊಸಯುಗದ ಸೈಬರ್ ಅಪರಾಧಗಳು ಸಾಕಷ್ಟು ಸಂಖ್ಯೆಯಲ್ಲಿ ವರದಿಯಾಗುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News