ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ: ಭಾರಿ ಮಳೆ, ಬಿರುಗಾಳಿ

Update: 2024-10-25 05:37 GMT

Photo credit: PTI

ಹೊಸದಿಲ್ಲಿ: ಡಾನಾ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ ಕಾರಣವಾಗಿದೆ. ಕೇಂದ್ರಪಾರ ಜಿಲ್ಲೆಯ ಭಿಟಾರ್ ಕನಿಕ ಹಾಗೂ ಭದ್ರಕ್ ಜಿಲ್ಲೆಯ ಧಮ್ರ ನಡುವೆ ಈ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ ಸುಮಾರು 110 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.

ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಹಾಗೂ ಜಗತ್ ಸಿಂಗ್ ಪುರ್ ಗೆ ಮಧ್ಯರಾತ್ರಿ ಗಂಟೆಗೆ ಸುಮಾರು 110 ಕಿಮೀ ವೇಗದ ಬಿರುಗಾಳಿಯೊಂದಿಗೆ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಈ ಭಾಗಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ.

ಈ ಚಂಡಮಾರುತಕ್ಕೆ ಖತರ್ ದೇಶವು ಡಾನಾ ಎಂದು ನಾಮಕರಣ ಮಾಡಿದ್ದು, ಇಂದು ಮಧ್ಯಾಹ್ನದ ವೇಳೆಗೆ ಹಂತಹಂತವಾಗಿ ಸುಂಟರಗಾಳಿಯಾಗಿ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಚಂಡಮಾರುತದ ತೀವ್ರತೆಗೆ ಹಲವೆಡೆ ಮರಗಳು ಉರುಳಿ ಬಿದ್ದಿವೆ ಎಂದು ವರದಿಯಾಗಿದೆ. ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೂರ್ ಕೂಡಾ ಚಂಡಮಾರುತದಿಂದ ಹಾನಿ ಅನುಭವಿಸಿದೆ.

ಗುರುವಾರ ಸಂಜೆ ಮುನ್ನೆಚ್ಚರಿಕೆಯ ಕ್ರಮವಾಗಿ ಅಮಾನತುಗೊಳಿಸಲಾಗಿದ್ದ ಭುವನೇಶ್ವರದಲ್ಲಿನ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೋಲ್ಕತ್ತಾದಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವೈಮಾನಿಕ ಸೇವೆಗಳು ಇಂದು ಬೆಳಗ್ಗೆ 8 ರಿಂದ ಪುನಾರಂಭಗೊಂಡಿವೆ.

ಎರಡೂ ರಾಜ್ಯಗಳಲ್ಲಿನ ಪ್ರಾಧಿಕಾರಗಳು ಲಕ್ಷಾಂತರ ಮಂದಿಯನ್ನು ತೆರವುಗೊಳಿಸಿದ್ದು, ಶಾಲೆಗಳನ್ನು ಮುಚ್ಚಲಾಗಿದೆ. 400ಕ್ಕೂ ಹೆಚ್ಚು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದ್ದು, ತೀವ್ರ ಸ್ವರೂಪದ ಚಂಡಮಾರುತದ ಕಾರಣಕ್ಕೆ ವಿಮಾನ ಕಾರ್ಯಾಚರಣೆಯನ್ನೂ ಅಮಾನತುಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News