ಭಾರತ ಮತ್ತು ಪಾಕ್ ಕರಾವಳಿಯಲ್ಲಿ ಚಂಡಮಾರುತ, ಸಾವಿರಾರು ಜನರ ಸ್ಥಳಾಂತರ

Update: 2024-08-29 16:21 GMT

ಸಾಂದರ್ಭಿಕ ಚಿತ್ರ | PTI 

ಅಹ್ಮದಾಬಾದ್/ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ತಾನದಲ್ಲಿ ಅರಬಿ ಸಮುದ್ರದುದ್ದಕ್ಕೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಜರಾತಿನಲ್ಲಿ ನೆರೆಹಾವಳಿ ತಲೆದೋರಿದೆ. ಶುಕ್ರವಾರದ ವೇಳೆಗೆ ಚಂಡಮಾರುತ ರೂಪುಗೊಳ್ಳಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಗುಜರಾತಿನ ವಿವಿಧ ನಗರಗಳಲ್ಲಿ ರಸ್ತೆಗಳು ಮತ್ತು ವಾಹನಗಳು ನೆರೆನೀರಿನಲ್ಲಿ ಭಾಗಶಃ ಮುಳುಗಿದ್ದು, ಜನರು ಸೊಂಟಮಟ್ಟದ ನೀರಿನಲ್ಲಿಯೇ ನಡೆಯುವಂತಾಗಿದೆ.

ರಾಜ್ಯದಲ್ಲಿ ಈ ವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 28 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರೆ,ಕರಾವಳಿ ಪ್ರದೇಶಗಳಲ್ಲಿ ಇನ್ನಷ್ಟು ಭಾರೀ ಗಾಳಿಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತ ಮತ್ತು ನೆರೆಯ ಪಾಕಿಸ್ತಾನದ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

‘ಕಳೆದ ಎರಡು ದಿನಗಳಿಂದ ವಿದ್ಯುತ್ ಪೂರೈಕೆಯಿಲ್ಲ. ನನಗೆ ಎಂಟು ತಿಂಗಳ ಮಗಳು ಮತ್ತು ಆಮ್ಲಜನಕ ಅಳವಡಿಸಲಾಗಿರುವ ಅಸ್ತಮಾ ರೋಗಿಯಾಗಿರುವ ತಾಯಿ ಇದ್ದಾರೆ ’ ಎಂದು ಕರಾವಳಿ ನಗರ ಜಾಮನಗರದ ನಿವಾಸಿ ಪ್ರಭುರಾಮ ಸೋನಿ ಸುದ್ದಿಸಂಸ್ಥೆಗೆ ತಿಳಿಸಿದರು.

ರವಿವಾರದಿಂದ ಕರಾವಳಿಗೆ ಸಮೀಪದ ನಗರಗಳಿಂದ 18 ಸಾವಿರಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಲಾಗಿದೆ ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳು ತಿಳಿಸಿದರು. ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೇನೆಯೂ ಭಾಗಿಯಾಗಿದೆ. ಕಳೆದ ವರ್ಷ ರಾಜ್ಯವನ್ನು ಅಪ್ಪಳಿಸಿದ್ದ ಬಿಪರ್‌ ಜಾಯ್ ಚಂಡಮಾರುತವು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದ್ದು,1.8 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿತ್ತು.

ಜಾಮಗರ ಮತ್ತು ಸಮೀಪದ ವಡಿನಾರ್‌ಗಳಲ್ಲಿ ಭಾರೀ ಮಳೆಯಾಗುತ್ತಿದೆಯಾದರೂ ಅಲ್ಲಿಯ ತೈಲ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಬಿ.ಕೆ.ಪಾಂಡ್ಯ ಸುದ್ದಿಸಂಸ್ಥೆಗೆ ತಿಳಿಸಿದರು.

ಗುಜರಾತ್ ಕರಾವಳಿಯಾಚೆ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಶುಕ್ರವಾರದ ವೇಳೆಗೆ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಆದರೆ ಮುಂದಿನ ಎರಡು ದಿನಗಳಲ್ಲಿ ಅದು ಭಾರತೀಯ ಕರಾವಳಿಯಿಂದ ದೂರ ಸಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ತಿಳಿಸಿದೆ.

ಅತ್ತ ಪಾಕಿಸ್ತಾನದಲ್ಲಿ ಶನಿವಾರದವರೆಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆಯು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಶುಕ್ರವಾರ ಗುಜರಾತಿನ ಭರೂಚ್, ಕಛ್ ಮತ್ತು ಸೌರಾಷ್ಟ್ರ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.

ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ದಿಢೀರ್ ಪ್ರವಾಹಗಳುಂಟಾಗಿದ್ದು, ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News