ವೇಗದ ರೈಲು ಸಂಪರ್ಕ ಯೋಜನೆಗೆ ಹಣ ಒದಗಿಸಲು ವಿಳಂಬ ; ದಿಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಡೆಲ್ಲಿ-ಮೀರತ್ ಪ್ರಾದೇಶಿಕ ವೇಗದ ರೈಲು ಸಂಪರ್ಕ ಯೋಜನೆಗೆ ಹಣ ಒದಗಿಸಲು ವಿಳಂಬಿಸುತ್ತಿರುವುದಕ್ಕೆ ದಿಲ್ಲಿ ಸರಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಟೀಕಿಸಿದೆ. ಈ ಯೋಜನೆಗೆ ರಾಜ್ಯ ಸರಕಾರದ ಜಾಹೀರಾತು ನಿಧಿಯಿಂದ ಹಣವನ್ನು ಪಡೆದುಕೊಳ್ಳುವಂತೆ ಸೂಚಿಸುವ ಆದೇಶಕ್ಕೆ ಮರುಚಾಲನೆ ನೀಡುವಂತೆ ನಮ್ಮನ್ನು ರಾಜ್ಯ ಸರಕಾರ ಬಲವಂತ ಪಡಿಸಬಾರದು ಎಂದು ನ್ಯಾಯಾಲಯ ಹೇಳಿದೆ.
ಕ್ಷಿಪ್ರ ರೈಲು ಯೋಜನೆಗೆ ಹಣ ಒದಗಿಸಲು ರಾಜ್ಯ ಸರಕಾರ ವಿಫಲವಾದರೆ, ರಾಜ್ಯ ಸರಕಾರದ ಈ ವರ್ಷದ ಜಾಹೀರಾತು ಬಜೆಟ್‌ನಿಂದ ಹಣವನ್ನು ಒದಗಿಸಲಾಗುವುದು ಎಂದು ನವೆಂಬರ್‌ನಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು ತನ್ನ ಆದೇಶದಲ್ಲಿ ಹೇಳಿತ್ತು.
ಯೋಜನೆಗೆ ಹಣ ಒದಗಿಸುವ ಪ್ರಸ್ತಾವಕ್ಕೆ ದಿಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ ಹಾಗೂ ಈಗ ಕೇಂದ್ರದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಬುಧವಾರ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರ ನ್ಯಾಯಾಲಯಕ್ಕೆ ತಿಳಿಸಿತು. ಏಳು ದಿನಗಳೊಳಗೆ ಕೇಂದ್ರ ಸರಕಾರದ ಅನುಮೋದನೆಯನ್ನು ಪಡೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ದಿಲ್ಲಿ ಸರಕಾರಕ್ಕೆ ಸೂಚಿಸಿತು.
ಸಮಸ್ಯೆ ಎಂದರೆ, ಜಾಹೀರಾತುಗಳಿಗಾಗಿ 580 ಕೋಟಿ ರೂ. ಬಜೆಟ್ ಅನುದಾನವನ್ನು ದಿಲ್ಲಿ ಸರಕಾರ ನೀಡುತ್ತದೆ, ಆದರೆ ಈ ಯೋಜನೆಗೆ ಬೇಕಾಗುವ 400 ಕೋಟಿ ರೂ. ಮೊತ್ತವನ್ನು ನೀಡಲು ಅದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿತ್ತು.
‘‘ಇಂಥ ರಾಷ್ಟ್ರೀಯ ಯೋಜನೆಗಳು ಬಾಕಿಯಾದರೆ ಹಾಗೂ ಜಾಹೀರಾತುಗಳಿಗಾಗಿ ಹಣವನ್ನು ಖರ್ಚು ಮಾಡಲಾದರೆ, ಮೂಲಸೌಕರ್ಯಕ್ಕೆ ಹಣವನ್ನು ನೀಡುವಂತೆ ನಾವು ನಿರ್ದೇಶನ ನೀಡುತ್ತೇವೆ’’ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಹೇಳಿದರು.
ವೇಗದ ರೈಲು ಯೋಜನೆಯು ದಿಲ್ಲಿಯನ್ನು ಉತ್ತರಪ್ರದೇಶದ ಮೀರತ್, ರಾಜಸ್ಥಾನದ ಆಳ್ವಾರ್ ಮತ್ತು ಹರ್ಯಾಣದ ಪಾಣಿಪತ್ ನಗರಗಳಿಗೆ ಸಂಪರ್ಕಿಸುತ್ತದೆ.