ಬ್ರಿಜ್‌ಭೂಷಣ್ ವಿರುದ್ಧ ದಿಲ್ಲಿ ಕೋರ್ಟ್ ಆದೇಶ ಗೆಲುವಿನೆಡೆಗೆ ಇಟ್ಟ ಒಂದು ಸಣ್ಣ ಹೆಜ್ಜೆ: ಸಾಕ್ಷಿ ಮಲಿಕ್
ಹೊಸದಿಲ್ಲಿ : ಲೈಂಗಿಕ ಕಿರುಕುಳ ಹಾಗೂ ಬೆದರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ದೋಷಾರೋಪ ರೂಪಿಸುವಂತೆ ದಿಲ್ಲಿ ನ್ಯಾಯಾಲಯವು ನೀಡಿದ ಆದೇಶವು, ಮಹಿಳಾ ಕುಸ್ತಿಪಟುಗಳು ತಮ್ಮ ಹೋರಾಟದಲ್ಲಿ ಗೆಲುವಿನೆಡೆಗೆ ಇರಿಸಿದ ಒಂದು ಸಣ್ಣ ಹೆಜ್ಜೆಯೆಂದು ಒಲಿಂಪಿಕ್ ಕಂಡು ಪದಕ ವಿಜೇತ ಕುಸ್ತಿ ಪಟು ಸಾಕ್ಷಿ ಮಲಿಕ್ ಬಣ್ಣಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ಐಎಎನ್‌ಎಸ್ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ಖಂಡಿತವಾಗಿಯೂ ಇದು ಗೆಲುವಿನೆಡೆಗೆ ಇರಿಸಿದ ಒಂದು ಸಣ್ಣ ಹೆಜ್ಜೆಯಾಗಿದೆ. ಹಲವಾರು ವರ್ಷಗಳಿಂದ ಯುವ ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಕಿರುಕುಳಕ್ಕೆ ಬ್ರಿಜ್ ಭೂಷಣ್ ಅವರನ್ನು ಹೊಣೆಗಾರರನ್ನಾಗಿ ಮಾಡಿರುವುದು ನೆಮ್ಮದಿ ತಂದಿದೆ. ಅಂತಿಮ ನ್ಯಾಯ ಸಿಗುವವರೆಗೆ ಹಾಗೂ ಆತನಿಗೆ ಶಿಕ್ಷೆಯಾಗುವವರೆಗೆ ನಾವು ಈ ಸಮರವನ್ನು ಮುಂದುವರಿಸಲಿದ್ದೇವೆ’’ಎಂದು ಹೇಳಿದರು.
ಇದು ಬ್ರಿಜ್‌ಭೂಷಣ್ ಹಾಗೂ ತನ್ನ ಮತ್ತು ವಿನೇಶ್ ನಡುವಿನ ಹೋರಾಟವಲ್ಲ. ಮಹಿಳಾ ಕುಸ್ತಿಪಟುಗಳ ಭಾವೀ ತಲೆಮಾರನ್ನು ಸಂರಕ್ಷಿಸುವ ಚಳವಳಿ ಇದಾಗಿದೆ ಎಂದು ರಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚು ಪದಕ ವಿಜೇತೆಯಾದ ಸಾಕ್ಷಿ ಹೇಳಿದ್ದಾರೆ.