ಮುಷ್ಕರ ಕೈಬಿಟ್ಟು ಅಗತ್ಯ ಸೇವೆ ಆರಂಭಿಸಿದ ಕೊಲ್ಕತ್ತಾ ವೈದ್ಯರು

Update: 2024-09-20 02:13 GMT

ಕೊಲ್ಕತ್ತಾ: ಕಳೆದ ತಿಂಗಳು ಇಲ್ಲಿನ ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿ ಕಳೆದ 41 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟು ಅಗತ್ಯ ಸೇವೆಗಳನ್ನು ಆರಂಭಿಸಲು ವೈದ್ಯರು ಗುರುವಾರ ಸಂಜೆ ನಿರ್ಧರಿಸಿದ್ದಾರೆ.

ಪ್ರತಿಭಟನಾ ನಿರತ ವೈದ್ಯರು ಶುಕ್ರವಾರ ಕೊಲ್ಕತ್ತಾದ ಸ್ವಾಸ್ಥ್ಯ ಭವನದಿಂದ ಸಿಬಿಐ ಕಚೇರಿ ಇರುವ ಸಿಜಿಓ ಕಾಂಪ್ಲೆಕ್ಸ್ ಗೆ ಪಾದಯಾತ್ರೆಯಲ್ಲಿ ತೆರಳಿ ಮುಷ್ಕರ ಕೈಬಿಡುವುದಾಗಿ ಘೋಷಿಸಿದ್ದಾರೆ.

"ಶನಿವಾರದಿಂದ ಅಗತ್ಯಸೇವೆಗಳನ್ನು ಪುನರಾರಂಭಿಸಲಿದ್ದೇವೆ. ಶುಕ್ರವಾರ ಮೆಗಾ ರ‍್ಯಾಲಿ ನಡೆಸುವ ಮೂಲಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ ಇರುವ ಸ್ವಾಸ್ಥ್ಯಭವನದ ಎದುರು ನಡೆಸುತ್ತಿರುವ ಧರಣಿಯನ್ನೂ ಕೈಬಿಡಲಿದ್ದೇವೆ" ಎಂದು ಪ್ರತಿಭಟನೆ ನೇತೃತ್ವ ವಹಿಸಿರುವ ಅಂಕಿತ್ ಮಹತಾ ಹೇಳಿದ್ದಾರೆ.

ರಾಜ್ಯದ ಆರೋಗ್ಯ ಸೇವಾ ವ್ಯವಸ್ಥೆ ಸುಲಲಿತವಾಗಿ ಮತ್ತು ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು 10 ಅಂಶಗಳ ನಿರ್ದೇಶನವನ್ನು ನೀಡಿದ ಬೆನ್ನಲ್ಲೇ ವೈದ್ಯರು ಈ ನಿರ್ಧಾರ ಕೈಗೊಂಡಿದ್ದಾರೆ. ಕಿರಿಯ ವೈದ್ಯರ ಐದು ಪ್ರಮುಖ ಬೇಡಿಕೆಗಳಲ್ಲಿ ಇದು ಕೂಡಾ ಸೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News