ಸಿಜೆ ನೇಮಕಾತಿ ವಿಳಂಬ: ಕೇಂದ್ರದ ವಿರುದ್ಧ ನ್ಯಾಯಾಲಯ ನಿಂದನೆ ದಾವೆ

Update: 2024-09-20 02:46 GMT

ಹೊಸದಿಲ್ಲಿ: ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಎಂ.ಎಸ್.ರಾಮಚಂದ್ರ ರಾವ್ ಅವರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ನ ಕೊಲಾಜಿಯಂ ಜುಲೈ 11 ರಂದು ಮಾಡಿದ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರುವಲ್ಲಿ "ಉದ್ದೇಶಪೂರ್ವಕ ಮತ್ತು ಇಚ್ಛಿತ" ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜಾರ್ಖಂಡ್ ಸರ್ಕಾರ ನ್ಯಾಯಾಲಯ ನಿಂದನೆ ದಾವೆ ದಾಖಲಿಸಿದೆ.

ರಾಜ್ಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಬಿ.ಆರ್.ಸಾರಂಗಿ ಜುಲೈ 19ರಂದು ನಿವೃತ್ತಿಯಾದ ಬಳಿಕ ರಾಜ್ಯಕ್ಕೆ ಎರಡು ತಿಂಗಳಿನಿಂದ ಮುಖ್ಯ ನ್ಯಾಯಮೂರ್ತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಕೊಲಾಜಿಯಂ, ಈ ನಿರೀಕ್ಷಿತ ನಿವೃತ್ತಿಯ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳನ್ನು ಜಾರ್ಖಂಡ್ ಹೈಕೋರ್ಟ್ ಸಿಜೆ ಆಗಿ ನೇಮಕ ಮಾಡಲು ಶಿಫಾರಸ್ಸು ಮಾಡಿತ್ತು ಎಂದು ಹೇಮಂತ್ ಸೊರೇನ್ ಸರ್ಕಾರ ಹೇಳಿದೆ.

ಆದರೆ ಶಿಫಾರಸ್ಸು ಮಾಡಿ ಎರಡು ತಿಂಗಳು ಕಳೆದರೂ, ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕೊಲಾಜಿಯಂ ಶಿಫಾರಸ್ಸುಗಳನ್ನು ಕಡೆಗಣಿಸಿದೆ. ಇದು ದೇಶದ ಅತ್ಯುನ್ನತ ಕೋರ್ಟ್ ನ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ವಿವರಿಸಿದೆ.

ಕೇಂದ್ರ ಸರ್ಕಾರದ ಈ ಉದ್ದೇಶಪೂರ್ವಕ ನಿಷ್ಕ್ರಿಯತೆಯು ಸಂವಿಧಾನದ 216ನೇ ವಿಧಿಯ ಉಲ್ಲಂಘನೆಯೂ ಆಗಿದೆ ಎಂದು ಪ್ರತಿಪಾದಿಸಿದೆ. ಇದರ ಪ್ರಕಾರ, ಪ್ರತಿ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಇತರ ನ್ಯಾಯಮೂರ್ತಿಗಳು ಇರಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News