ದಿಲ್ಲಿ ಅಬಕಾರಿ ನೀತಿ ಪ್ರಕರಣ : ಕೇಜ್ರಿವಾಲ್ ಗೆ 4ನೇ ಬಾರಿ ಸಮನ್ಸ್ ನೀಡಿದ ಈಡಿ

Update: 2024-01-13 15:41 GMT

ಅರವಿಂದ ಕೇಜ್ರಿವಾಲ್ | Photo: PTI 

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಶನಿವಾರ ನಾಲ್ಕನೇ ಬಾರಿಗೆ ಸಮನ್ಸ್ ನೀಡಿದೆ.

ಜನವರಿ 18ರಂದು ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಕೇಂದ್ರೀಯ ತನಿಖಾ ಸಂಸ್ಥೆಯು ಆಮ್ ಆದ್ಮಿ ಪಕ್ಷದ ಮುಖ್ಯಸ್ಥನಿಗೆ ಸೂಚಿಸಿದೆ.

ಇದಕ್ಕೂ ಮೊದಲು, ಜನವರಿ 3ರಂದು ನಡೆಯಬೇಕಾಗಿದ್ದ ವಿಚಾರಣೆಗೆ ಕೇಜ್ರಿವಾಲ್ ಗೈರು ಹಾಜರಾಗಿದ್ದರು. ಅದು ಈ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯದ ವಿಚಾರಣೆಗೆ ಕೇಜ್ರಿವಾಲ್ ಗೈರು ಹಾಜರಾಗಿದ್ದು ಮೂರನೇ ಬಾರಿಯಾಗಿತ್ತು. ಅದಕ್ಕೂ ಮೊದಲು, ನವೆಂಬರ್ 2 ಮತ್ತು ಡಿಸೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯ ಕರೆದಿದ್ದರೂ ಅವರು ಗೈರುಹಾಜರಾಗಿದ್ದರು.

ವಿಚಾರಣೆಗೆ ಹಾಜರಾಗಲು ಕೇಜ್ರಿವಾಲ್ ಸಿದ್ಧರಿದ್ದಾರೆ, ಆದರೆ ಅನುಷ್ಠಾನ ನಿರ್ದೇಶನಾಲಯದ ಸಮನ್ಸ್ ಕಾನೂನುಬಾಹಿರವಾಗಿದೆ ಎಂದು ಆಮ್ ಆದ್ಮಿ ಪಕ್ಷ ಜನವರಿ 3ರಂದು ಹೇಳಿತ್ತು.

‘‘ಲೋಕಸಭಾ ಚುನಾವಣೆಗೆ ಮುನ್ನ ಕೇಜ್ರಿವಾಲ್ ರನ್ನು ಬಂಧಿಸಲು ಬಿಜೆಪಿ ಬಯಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವುದರಿಂದ ಕೇಜ್ರಿವಾಲ್ ರನ್ನು ತಡೆಯಲು ಅದು ಮುಂದಾಗಿದೆ’’ ಎಂದು ಪಕ್ಷ ಆರೋಪಿಸಿದೆ.

‘‘ಅನುಷ್ಠಾನ ನಿರ್ದೇಶನಾಲಯದ ಸಮನ್ಸ್, ದೋಣಿಯಲ್ಲಿ ಗಾಳ ಹಾಕುತ್ತಾ ಸಿಕ್ಕಿದ ಮೀನುಗಳನ್ನು ಹಿಡಿದುಕೊಂಡು ಮುಂದಕ್ಕೆ ಹೋಗುವ ತಂತ್ರದಂತೆ ಕಾಣುತ್ತಿದೆ. ವಿಚಾರಣೆಗೆ ನನ್ನನ್ನು ವೈಯಕ್ತಿಕ ನೆಲೆಯಲ್ಲಿ ಕರೆಯಲಾಗಿದೆಯೇ ಅಥವಾ ಮುಖ್ಯಮಂತ್ರಿಯ ನೆಲೆಯಲ್ಲಿ ಕರೆಯಲಾಗಿದೆಯೇ ಎನ್ನುವುದನ್ನು ಸಮನ್ಸ್ ನಲ್ಲಿ ತಿಳಿಸಲಾಗಿಲ್ಲ’’ ಎಂದು ಕೇಜ್ರಿವಾಲ್ ಹೇಳಿದ್ದರು.

‘‘ಯಾವುದೇ ಕಾನೂನು ಸಮನ್ಸ್ ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಆದರೆ, ಅನುಷ್ಠಾನ ನಿರ್ದೇಶನಾಲಯದ ಈ ಸಮನ್ಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ. ಈ ಸಮನ್ನು ವಾಪಸ್ ಪಡೆದುಕೊಳ್ಳಬೇಕು. ನಾನು ಪ್ರಾಮಾಣಿಕತೆಯಿಂದ ಬದುಕಿದ್ದೇನೆ ಹಾಗೂ ನನ್ನ ಇಡೀ ಬದುಕು ಪಾರದರ್ಶಕವಾಗಿದೆ. ನನ್ನಲ್ಲಿ ಅಡಗಿಸಿಡುವಂಥಾದ್ದು ಏನೂ ಇಲ್ಲ’’ ಎಂದು ಅವರು ಹೇಳಿದ್ದರು.

ಬಿಜೆಪಿಯಿಂದ ಅನುಷ್ಠಾನ ನಿರ್ದೇಶನಾಲಯದ ‘‘ದುರುಪಯೋಗ’’ಆಮ್ ಆದ್ಮಿ ಪಕ್ಷ ತಿರುಗೇಟು

ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವುದರಿಂದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ರನ್ನು ತಡೆಯಲು ಬಿಜೆಪಿಯು ಅನುಷ್ಠಾನ ನಿರ್ದೇಶನಾಲಯವನ್ನು ‘‘ದುರುಪಯೋಗಪಡಿಸಿಕೊಳ್ಳುತ್ತಿದೆ’’ ಎಂದು ದಿಲ್ಲಿ ರಾಜ್ಯದ ಪರಿಸರ ಸಚಿವ ಗೋಪಾಲ್ ರೈ ಶನಿವಾರ ಆರೋಪಿಸಿದ್ದಾರೆ.

ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಪ್ ಮುಖ್ಯಸ್ಥರಿಗೆ ಅನುಷ್ಠಾನ ನಿರ್ದೇಶನಾಲಯವು ನಾಲ್ಕನೇ ಸಮನ್ಸ್ ನೀಡಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈ, ಕೇಜ್ರಿವಾಲ್ ಗೆ ಸಮನ್ಸ್ ನೀಡಲು ಅನುಷ್ಠಾನ ನಿರ್ದೇಶನಾಲಯವು ಆಯ್ದುಕೊಂಡಿರುವ ಸಮಯವನ್ನು ಪ್ರಶ್ನಿಸಿದರು. ಜನವರಿ 18ರಿಂದ ಗೋವಾ ಪ್ರವಾಸ ಕೈಗೊಳ್ಳಲು ಕೇಜ್ರಿವಾಲ್ ನಿರ್ಧರಿಸಿದ್ದು, ಅಂದೇ ವಿಚಾರಚೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಅವರು ಹೇಳಿದರು.

‘‘ಬಿಜೆಪಿಯ ರಾಜಕೀಯ ಅಸ್ತ್ರವಾಗುವುದರಿಂದ ಅನುಷ್ಠಾನ ನಿರ್ದೇಶನಾಲಯವು ಹಿಂದೆ ಸರಿಯಬೇಕು’’ ಎಂದು ದಿಲ್ಲಿ ಪರಿಸರ ಸಚಿವರು ಒತ್ತಾಯಿಸಿದರು.

ಸಮನ್ಸ್ ದಿಲ್ಲಿ ಮುಖ್ಯಮಂತ್ರಿಗೆ ತಲುಪುವ ಮೊದಲೇ ಅದರ ಸುದ್ದಿ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು ಎಂದು ಅವರು ಆರೋಪಿಸಿದರು.

ಈ ಬಾರಿ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುವರೇ ಎಂಬ ಪ್ರಶ್ನೆಗೆ, ‘‘ಅವರು ಕಾನೂನು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಮತ್ತು ಅವರ ಸಲಹೆಯಂತೆ ನಡೆದುಕೊಳ್ಳುತ್ತಾರೆ’’ ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News