ಸಂಪುಟ ಸ್ಥಾನ ನಿರಾಕರಣೆ: ಪಕ್ಷದ ಹುದ್ದೆಗೆ ಶಿವಸೇನೆ ಶಾಸಕ ರಾಜೀನಾಮೆ

Update: 2024-12-16 03:14 GMT

ಮುಂಬೈ: ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಸ್ಥಾನ ವಂಚಿತರಾಗಿರುವ ಶಿವಸೇನೆ ಶಾಸಕ ನರೇಂದ್ರ ಬೋಂಧೇಕರ್ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಉಪ ನಾಯಕರಾಗಿದ್ದ ಅವರು, ವಿದರ್ಭ ಭಾಗಕ್ಕೆ ಪಕ್ಷದ ಸಂಯೋಜಕರಾಗಿದ್ದರು. ಈ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಕೂಟ 62 ಕ್ಷೇತ್ರಗಳ ಪೈಕಿ 47ನ್ನು ಗೆದ್ದುಕೊಂಡಿತ್ತು.

ಭಾಂದರಾ- ಪಾವನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿಲ್ಲ. ಮೂರು ಬಾರಿಯ ಶಾಸಕರಾಗಿರುವ ಬೋಂಧೇಕರ್ ಅವರಿಗೆ ಪಕ್ಷ ಸಚಿವ ಸ್ಥಾನದ ಭರವಸೆ ನೀಡಿತ್ತು. ಆದರೆ ಸಂಪುಟದಲ್ಲಿ ಅವರು ಸ್ಥಾನ ಪಡೆದಿಲ್ಲ. ಏಕನಾಥ್ ಶಿಂಧೆ, ಹಿರಿಯ ಮುಖಂಡ ಉದಯ ಸಾಮಂತ್ ಮತ್ತು ಶ್ರೀಕಾಂತ್ ಶಿಂಧೆಯವರಿಗೆ ಸಂದೇಶ ಕಳುಹಿಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉದಯ ಸಾಮಂತ್ ಭಾನುವಾರ ಫಡ್ನವೀಸ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಮೂರು ವಾರಗಳ ಬಳಿಕ ಫಡ್ನವೀಸ್ ಸಂಪುಟಕ್ಕೆ 39 ಮಂದಿಯನ್ನು ಸೇರಿಸಿಕೊಂಡಿದ್ದು, ಸಿಎಂ ಹಾಗೂ ಇಬ್ಬರು ಉಪಮುಖ್ಯಮಂತ್ರಿಗಳು ಸೇರಿ ಎಲ್ಲ 42 ಸ್ಥಾನಗಳೂ ಭರ್ತಿಯಾಗಿವೆ. ಮಿತ್ರಪಕ್ಷಗಳು 20 ಸಚಿವ ಸ್ಥಾನ ಪಡೆದಿದ್ದರೆ, ಬಿಜೆಪಿ 19 ಮಂದಿಯನ್ನು ಸಚಿವರನ್ನಾಗಿ ಸೇರಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News