ʼʼನನ್ನ ಮೊಮ್ಮಗನನ್ನು ಎಲ್ಲಿಟ್ಟಿದ್ದಾಳೆ?: ಆತ್ಮಹತ್ಯೆ ಪ್ರಚೋದನೆ ಆರೋಪದಲ್ಲಿ ಸೊಸೆಯ ಬಂಧನದ ಬೆನ್ನಲ್ಲೇ ಟೆಕ್ಕಿ ಸುಭಾಷ್ ತಂದೆ ಪ್ರಶ್ನೆ

Update: 2024-12-15 17:04 GMT

ಟೆಕ್ಕಿ ಅತುಲ್ ಸುಭಾಷ್ ತಂದೆ ಪವನ್ ಕುಮಾರ್ ಮೋದಿ | PC : ANI/X

ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಸಂಬಂಧ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಹಾಗೂ ಸಹೋದರ ಅನುರಾಗ್‌ನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ತಮ್ಮ ನಾಲ್ಕು ವರ್ಷದ ಮೊಮ್ಮಗ ನಾಪತ್ತೆಯಾಗಿದ್ದು, ಆತನ ಬಗ್ಗೆ ನಾವು ಕಳವಳಗೊಂಡಿದ್ದೇವೆ ಎಂದು ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆ ಪವನ್ ಕುಮಾರ್ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.

ಸೊಸೆ ಹಾಗೂ ಆಕೆಯ ಕುಟುಂಬದ ಸದಸ್ಯರನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ಪವನ್ ಕುಮಾರ್ ಮೋದಿ, "ಆಕೆ ನನ್ನ ಮೊಮ್ಮಗನನ್ನು ಎಲ್ಲಿಟ್ಟಿದ್ದಾಳೆ ಎಂದು ತಿಳಿಯುತ್ತಿಲ್ಲ. ಆತ ಕೊಲೆಯಾಗಿದ್ದಾನೊ ಅಥವಾ ಜೀವಂತವಾಗಿದ್ದಾನೊ? ಆತನ ಬಗ್ಗೆ ನಮಗೇನೂ ತಿಳಿಯುತ್ತಿಲ್ಲ. ನನಗೆ ನನ್ನ ಮೊಮ್ಮಗ ನಮ್ಮೊಂದಿಗಿರುವುದು ಬೇಕಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಪುತ್ರನ ಕೊನೆಯ ಆಸೆಯಂತೆ, ಆತನಿಗೆ ನ್ಯಾಯ ದೊರೆಯುವವರೆಗೂ ಆತನ ಚಿತಾಭಸ್ಮವನ್ನು ನಾವು ನದಿಯಲ್ಲಿ ವಿಸರ್ಜಿಸುವುದಿಲ್ಲ ಎಂದು ಶಪಥ ಮಾಡಿದ ಪವನ್ ಕುಮಾರ್ ಮೋದಿ, "ನಾವು ಆತನ ಚಿತಾಭಸ್ಮವನ್ನು ತಂದಿದ್ದೇವೆ. ನಾವು ಧಾರ್ಮಿಕ ವ್ಯಕ್ತಿಗಳಾಗಿದ್ದರೂ, ಆತನಿಗೆ ನ್ಯಾಯ ದೊರೆಯುವವರೆಗೂ ಆತನ ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜಿಸುವುದಿಲ್ಲ" ಎಂದು ಶಪಥ ಮಾಡಿದರು.

ಜೌನ್ಪುರ್ ಕೌಟುಂಬಿಕ ನ್ಯಾಯಾಲಯದಲ್ಲಿ ಅತುಲ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಭ್ರಷ್ಟರು ಎಂದು ಆರೋಪಿಸಿದ ಪವನ್ ಕುಮಾರ್ ಮೋದಿ, "ಆಕೆ ನನ್ನ ಪುತ್ರನಿಂದ ಲಂಚ ಕೇಳಿದ್ದಳು. ಆದರೆ ಆತ ಲಂಚ ನೀಡುವಂಥ ವ್ಯಕ್ತಿಯಾಗಿರಲಿಲ್ಲ. ಆತ ದಂಡ ಪಾವತಿಸಲು ಸಿದ್ಧನಿದ್ದನೇ ಹೊರತು ಲಂಚವನ್ನಲ್ಲ" ಎಂದೂ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News