ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಇಲ್ಲವೇ ಕಠಿಣ ಕ್ರಮ ಎದುರಿಸಿ: ನಕ್ಸಲರಿಗೆ ಅಮಿತ್ ಶಾ ಎಚ್ಚರಿಕೆ
ಜಗದಲಪುರ(ಛತ್ತೀಸ್‌ಗಡ): ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಮತ್ತು ಮುಖ್ಯವಾಹಿನಿಯನ್ನು ಸೇರಿಕೊಳ್ಳುವಂತೆ ಅಥವಾ ಭದ್ರತಾ ಪಡೆಗಳಿಂದ ಕಠಿಣ ಕ್ರಮವನ್ನು ಎದುರಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರವಿವಾರ ಇಲ್ಲಿ ನಕ್ಸಲರಿಗೆ ಎಚ್ಚರಿಕೆ ನೀಡಿದರು. ಶರಣಾಗುವ ನಕ್ಸಲರ ಪುನರ್ವಸತಿ ಸರಕಾರದ ಹೊಣೆಗಾರಿಕೆಯಾಗಿದೆ ಎಂದೂ ಅವರು ಹೇಳಿದರು.
ಜಗದಲಪುರದಲ್ಲಿ ‘ಬಸ್ತಾರ್ ಒಲಿಂಪಿಕ್ಸ್’ ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ,ಮಾರ್ಚ್ 2026ರ ವೇಳೆಗೆ ದೇಶವು ಮಾವೋವಾದಿಗಳಿಂದ ಮುಕ್ತವಾಗಲಿದೆ. ಶರಣಾಗಲು ಮಾವೋವಾದಿಗಳು ಒಪ್ಪದಿದ್ದರೆ ಭದ್ರತಾ ಪಡೆಗಳು ಅವರನ್ನು ಸದೆಬಡಿಯಲಿವೆ ಎಂದರು.
2026,ಮಾ.31ರ ವೇಳೆಗೆ ಭಾರತವನ್ನು ನಕ್ಸಲ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವನ್ನು ಈಡೇರಿಸಲು ಛತ್ತೀಸ್‌ಗಡ ಪೋಲಿಸರು ಬದ್ಧರಾಗಿದ್ದಾರೆ ಎಂದ ಅವರು, ಛತ್ತೀಸ್‌ಗಡ ಸರಕಾರದ ಪುನರ್ವಸತಿ ನೀತಿಯು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ನೀವು ಶರಣಾಗತರಾಗಿ ಮುಖ್ಯವಾಹಿನಿಗೆ ಸೇರಿದರೆ ನೀವು ಛತ್ತೀಸ್‌ಗಡ ಮತ್ತು ಭಾರತದ ಅಭಿವೃದ್ಧಿಗೆ ಕೊಡುಗೆಯನ್ನು ಸಲ್ಲಿಸುತ್ತೀರಿ ಎಂದರು.