ಪ್ರೇಮವನ್ನು ತಿರಸ್ಕರಿಸಿದ ಅತ್ತಿಗೆಯನ್ನು ಕೊಂದು ತಲೆಕಡಿದ ದುಷ್ಕರ್ಮಿ
ಕೋಲ್ಕತಾ: ವ್ಯಕ್ತಿಯೋರ್ವ ತನ್ನ ಪ್ರೇಮವನ್ನು ತಿರಸ್ಕರಿಸಿದ ಅತ್ತಿಗೆಯನ್ನು ಭೀಕರವಾಗಿ ಕೊಲೆಗೈದ ಘಟನೆ ಕೋಲ್ಕತದಿಂದ ವರದಿಯಾಗಿದೆ. ತಿರಸ್ಕಾರವನ್ನು ಸಹಿಸದ ವ್ಯಕ್ತಿಯು ಮಹಿಳೆಯನ್ನು ಮೊದಲು ಕತ್ತುಹಿಸುಕಿ ಕೊಂದು ತಲೆ ಕಡಿದನು. ಬಳಿಕ ದೇಹವನ್ನು ಮೂರು ಭಾಗಗಳಾಗಿ ತುಂಡರಿಸಿ ದಕ್ಷಿಣ ಕೋಲ್ಕತದ ಟೋಲಿಗಂಜ್ ಉಪನಗರದಲ್ಲಿರುವ ಬಹುಮಹಡಿ ಕಟ್ಟಡವೊಂದರ ಹಿಂಭಾಗದಲ್ಲಿರುವ ಕಸದ ತೊಟ್ಟಿಗೆ ಎಸೆದನು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ತಲೆಯು ಶುಕ್ರವಾರ ಬೆಳಗ್ಗೆ ರೀಜಂಟ್ ಪಾರ್ಕ್ ಪ್ರದೇಶದಲ್ಲಿ ಪತ್ತೆಯಾಯಿತು. ಪ್ಲಾಸ್ಟಿಕ್ ಚೀಲವೊಂದರಲ್ಲಿ ಸುತ್ತಿಟ್ಟಿದ್ದ ರುಂಡವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ದೇಹದ ಉಳಿದ ಭಾಗಗಳಿಗಾಗಿ ಹುಡುಕಾಡಿದರು. ಮಹಿಳೆಯ ದೇಹದ ಮುಂಡ ಮತ್ತು ಕೆಳಭಾಗಗಳು ಶನಿವಾರ ಕೆರೆಯೊಂದರ ಸಮೀಪ ಪತ್ತೆಯಾದವು.
ಪೊಲೀಸರು ಬಳಿಕ 35 ವರ್ಷದ ಕಟ್ಟಡ ಕಾರ್ಮಿಕ ಅತಿಯುರ್ ರಹಮಾನ್ ಲಸ್ಕರ್ ನನ್ನು ಬಂಧಿಸಿದರು. ಅದೇ ಪ್ರದೇಶದಲ್ಲಿ ಮನೆಗೆಲಸದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ತನ್ನ ಅತ್ತಿಗೆಯನ್ನು ಕೊಂದಿರುವುದನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ. ತನ್ನ ಪ್ರೇಮವನ್ನು ಮಹಿಳೆಯು ಪದೇ ಪದೇ ತಿರಸ್ಕರಿಸಿದ ಬಳಿಕ ತಾನು ಈ ಕೃತ್ಯ ನಡೆಸಿರುವುದಾಗಿ ಅವನು ಹೇಳಿದ್ದಾನೆ.
ಮಹಿಳೆಯು ಎರಡು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದು, ಪ್ರತಿ ದಿನ ಕೆಲಸಕ್ಕೆ ಲಸ್ಕರ್‍ನೊಂದಿಗೆ ಪ್ರಯಾಣಿಸುತ್ತಿದ್ದರು.
ಆರೋಪಿಯ ಪ್ರೇಮ ಪ್ರಸ್ತಾಪದ ಬಳಿಕ, ಮಹಿಳೆಯು ಅವನಿಂದ ದೂರವಿರುತ್ತಿದ್ದರು ಮತ್ತು ಆತನ ಫೋನ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಲಸ್ಕರ್, ಗುರುವಾರ ಸಂಜೆ ಮಹಿಳೆಯ ಕೆಲಸ ಮುಗಿದ ಬಳಿಕ, ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ತನ್ನೊಂದಿಗೆ ಬರುವಂತೆ ಬಲವಂತಪಡಿಸಿದನು ಎಂದು ಪೊಲೀಸ್ ಅಧಿಕಾರಿ ಬಿದಿಶಾ ಕಲಿಟ ಹೇಳಿದರು.
ಆ ಕಟ್ಟಡದಲ್ಲಿ ಲಸ್ಕರ್ ತನ್ನ ಅತ್ತಿಗೆಯನ್ನು ಕತ್ತು ಹಿಸುಕಿ ಕೊಂದನು ಎಂದು ಅವರು ಹೇಳಿದರು. ಬಳಿಕ, ರುಂಡವನ್ನು ಕತ್ತರಿಸಿದನು ಮತ್ತು ದೇಹವನ್ನು ಮೂರು ಭಾಗಗಳಾಗಿ ತುಂಡರಿಸಿದನು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಲಸ್ಕರ್‍ನನ್ನು ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‍ನಲ್ಲಿರುವ ಅವನ ತವರು ಗ್ರಾಮ ಬಸುಲ್ಡಂಗದಲ್ಲಿ ಪತ್ತೆಹಚ್ಚಿ ಬಂಧಿಸಿದರು.