ವಿಶ್ವವಿಖ್ಯಾತ ತಬಲಾ ವಾದಕ ಝಾಕಿರ್ ಹುಸೈನ್ ನಿಧನ
ಹೊಸದಿಲ್ಲಿ: ವಿಶ್ವಪ್ರಸಿದ್ಧ ತಬಲಾ ವಾದಕ ಝಕೀರ್ ಹುಸೈನ್ ರವಿವಾರ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಬಲಾ ಮಾಂತ್ರಿಕನೆಂದೇ ಜನಪ್ರಿಯರಾಗಿದ್ದ ಝಕೀರ್ ಹುಸೈನ್ ಅವರ ನಿಧನದೊಂದಿಗೆ ಸಂಗೀತ ಜಗತ್ತಿನ ಅನರ್ಘ್ಯ ರತ್ನವೊಂದು ಕಣ್ಮರೆಯಾಗಿದೆ.
73 ವರ್ಷದ ಝಕೀರ್ ಹುಸೈನ್ ಅವರು ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. ಅಮೆರಿಕದಲ್ಲಿ ನೆಲೆಸಿದ್ದ ಝಕೀರ್ ಅವರು ತನ್ನ ಸುದೀರ್ಘ ಸಂಗೀತ ಜೀವನದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಮೂರು ಗ್ರ್ಯಾಮಿ ಪುರಸ್ಕಾರಗಳು ಸೇರಿದಂತೆ ತನ್ನ ಸಂಗೀತ ಬದುಕಿನಲ್ಲಿ ಒಟ್ಟು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಆರು ದಶಕಗಳ ತನ್ನ ಸಂಗೀತ ವೃತ್ತಿಯಲ್ಲಿ ಝಕೀರ್ ಅವರು ಹಲವಾರು ಖ್ಯಾತ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಕಲಾವಿದರೊಂದಿಗೆ ಪ್ರದರ್ಶನಗಳನ್ನು ನೀಡಿದ್ದಾರೆ. 1973ರಲ್ಲಿ ಇಂಗ್ಲೆಂಡ್‌ನ ಗಿಟಾರ್ ವಾದಕ ಜಾನ್ ಮ್ಯಾಕ್‌ಲೌಗ್ಲಿನ್, ವಯೊಲಿನ್ ವಾದಕ ಎಲ್.ಶಂಕರ್ ಹಾಗೂ ತಾಳವಾದ್ಯ ಕಲಾವಿದ ವಿಕ್ಕು ವಿನಾಯಗರಂ ಅವರೊಂದಿಗೆ ನಡೆಸಿಕೊಟ್ಟ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಜಾಝ್ ಸಂಗೀತದ ಫ್ಯುಶನ್ ಜುಗಲ್‌ಬಂಧಿ ಸಂಗೀತಲೋಕದಲ್ಲಿ ಅವಿಸ್ಮರಣೀಯವಾಗಿದೆ.
ಭಾರತದ ಅತ್ಯಂತ ಶಾಸ್ತ್ರೀಯ ಸಂಗೀತ ಕಲಾವಿದರಲ್ಲೊಬ್ಬರೆಂದು ಗುರುತಿಸಲಾದ ಝಕೀರ್ ಹುಸೈನ್ ಅವರಿಗೆ 1988ರಲ್ಲಿ ಪದ್ಮವಿಭೂಷಣ, 2002ರಲ್ಲಿ ಪದ್ಮಭೂಷಣ ಹಾಗೂ 2023ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳು ದೊರೆತಿದ್ದವು.
ಝಾಕಿರ್ ಅವರು ಕಥಕ್ ನೃತ್ಯಗಾರ್ತಿ ಮತ್ತು ಶಿಕ್ಷಕಿ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.